ವಿವಾಹ -
	ಪ್ರಪಂಚದ ಎಲ್ಲೆಡೆ ಒಂದಲ್ಲ ಒಂದು ವಿಧದಲ್ಲಿ ಕಂಡು ಬರುವ ಸಾಮಾಜಿಕ ವ್ಯವಸ್ಥೆ. ಪ್ರತಿಯೊಂದು ಸಮಾಜದಲ್ಲಿಯೂ ಇರುವ, ಸಮಾಜಮಾನ್ಯ ಸುವ್ಯವಸ್ಥಿತ ಗಂಡುಹೆಣ್ಣುಗಳ ಲೈಂಗಿಕ ಸಂಯೋಗವೇ ವಿವಾಹ(ಮ್ಯಾರೇಜ್). ವಿಭಿನ್ನ ಲಿಂಗಗಳ ವ್ಯಕ್ತಿಗಳು ಗಂಡ-ಹೆಂಡತಿಯಾಗಿ (ದಂಪತಿ) ಒಂದುಗೂಡಿ ಹೊಸ ಕುಟುಂಬ ಜೀವನ ಏರ್ಪಡುವ ಸ್ಥಿತಿ ಅಥವಾ ಅಂತಸ್ತು. ಪ್ರತಿಯೊಂದು ಸಮಾಜದಲ್ಲಿಯೂ ಸಮಾಜ ಮಾನ್ಯಮಾಡದ ಲೈಂಗಿಕ ಸಂಬಂಧಗಳು ಇರುತ್ತವೆ. ಆದರೆ ವಿವಾಹದ ಸಂಬಂಧ, ಮಿಕ್ಕ ಲೈಂಗಿಕ ಸಂಯೋಗಗಳಿಗಿಂತ ಸುಸ್ಥಿರವಾದುದು. ವಿವಾಹ ವ್ಯವಸ್ಥೆ ಕುಟುಂಬವನ್ನು ಸುವ್ಯವಸ್ಥಿತವಾಗಿರುವಂತೆ ಮಾಡುತ್ತದೆ. ವಿವಾಹದಿಂದ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀ ಸಮಾಜದಲ್ಲಿ ಗೃಹಸ್ಥ ಮತ್ತು ಗೃಹಿಣಿಯ ಸ್ಥಾನ ಹೊಂದುವರು. ಇದರಿಂದ ಮನೆತನದ ಸಂತಾನಾಭಿವೃದ್ಧಿ ಸಾಧ್ಯವಾಗುತ್ತದೆ, ಪುರುಷ ಮತ್ತು ಸ್ತ್ರೀ ಆರ್ಥಿಕ ವ್ಯವಸ್ಥೆಯಲ್ಲಿ ಸಹಕರಿಸಲು ಅನುಕೂಲವಾಗುತ್ತದೆ. ಪ್ರತಿಯೊಂದು ಸಮಾಜದಲ್ಲಿಯೂ ಸ್ತ್ರೀಪುರುಷರಲ್ಲಿ ಕಾರ್ಯವಿಂಗಡಣೆ ಅಥವಾ ಶ್ರಮವಿಭಜನೆ ಇರುತ್ತದೆ. ಗೃಹಕೃತ್ಯ ನಡೆಸಲು ಪುರುಷ ಮತ್ತು ಸ್ತ್ರೀಯ ಪರಸ್ಪರ ಅವಲಂಬನೆ ಆವಶ್ಯಕ. ವಿವಾಹವಾದಲ್ಲಿ ಮಾತ್ರ ಪುರುಷ ಮತ್ತು ಸ್ತ್ರೀ, ಆರ್ಥಿಕ ಹಾಗೂ ಲೈಂಗಿಕ ಜೀವನಗಳಲ್ಲಿ ಸಹಭಾಗಿಗಳಾಗುತ್ತಾರೆ. 

	ಪ್ರತಿಯೊಂದು ಸಮಾಜದಲ್ಲಿಯೂ ವಿವಾಹದ ಸಂದರ್ಭದಲ್ಲಿ ಅನೇಕ ವಿಧಿಕ್ರಿಯೆಗಳಿರುತ್ತವೆ; ವಿವಾಹ ಪೂರ್ಣವಾಗುವುದು ಈ ವಿಧಿಕ್ರಿಯೆಗಳು ಮುಗಿದಾಗ ಮಾತ್ರ. ವಿವಾಹ ಸಾಧಾರಣವಾಗಿ ಹಿರಿಯರ ಆಶೀರ್ವಾದಗಳಿಂದ ಪ್ರಾರಂಭವಾಗಿ ಕ್ರಮೇಣ ಧಾರ್ಮಿಕ ಕ್ಷೇತ್ರದ ಕರ್ಮಗಳನ್ನೊಳಗೊಂಡು ಸಂಪೂರ್ಣವಾಗುತ್ತದೆ. ಸಮಾಜ ಆಚರಿಸುವ ವೈವಾಹಿಕ ವಿಧಿಕ್ರಿಯೆಗಳಲ್ಲಿ ವೈವಿಧ್ಯಗಳಿರುತ್ತವೆ. ಹಿಂದುಗಳಲ್ಲಿ ವಿವಾಹ ಅನೇಕ ಧಾರ್ಮಿಕ ಕ್ರಿಯೆಗಳನ್ನು ಒಳಗೊಂಡಿದೆ. ಆದರೆ ಅಸ್ಸಾಮಿನ ಅಭೋರರ ವಿವಾಹದ ವಿಧಿಗಳು ಸರಳವಾದವು. ಅವರಲ್ಲಿ ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ಊಟ ಹಾಕಿದರೆ ಮದುವೆ ಸಂಪೂರ್ಣವಾಯಿತೆಂದು ತಿಳಿಯುತ್ತಾರೆ. ವೈವಾಹಿಕ ಮಾನ್ಯತೆ ಸೂಚಿಸುವ ಚಿಹ್ನೆಯನ್ನು ಧರಿಸುವುದು ಅನೇಕ ಸಮಾಜಗಳಲ್ಲಿ ರೂಢಿಯಲ್ಲಿದೆ. ಹಿಂದು ಸ್ತ್ರೀಯರಲ್ಲಿ ಸಾಮಾನ್ಯವಾಗಿ ಎಲ್ಲರೂ ಹಣೆಯಲ್ಲಿ ಕುಂಕುಮ ಇಟ್ಟುಕೊಳ್ಳುತ್ತಾರೆ. ಕತ್ತಿನಲ್ಲಿ ತಾಳಿ ಧರಿಸುತ್ತಾರೆ. ಕ್ರೈಸ್ತರಲ್ಲಿ ಮದುವೆಯಾದ ಪುರುಷರು ಮತ್ತು ಸ್ತ್ರೀಯರು ಕೈಬೆರಳುಗಳಲ್ಲಿ ಉಂಗುರಗಳನ್ನು ಧರಿಸುವ ಪದ್ಧತಿಯಿದೆ. 

	ಮಾನವ ಸಮಾಜಗಳಲ್ಲಿ ವಿವಾಹ ಹೇಗೆ ಸರ್ವವ್ಯಾಪಿಯೋ ಹಾಗೆಯೇ ವಿವಾಹದಲ್ಲಿ ನಿರ್ಬಂಧಗಳೂ ನಿಷೇಧಗಳೂ ಇರುತ್ತವೆ. ಕೇವಲ ಲೈಂಗಿಕ ವ್ಯತ್ಯಾಸಗಳನ್ನು ಮಾತ್ರ ಗಣನೆಗೆ ತಾರದೆ, ವಿವಾಹವಾಗುವವರ ಮೇಲೆ ಸಮಾಜ ಅನೇಕ ನಿಷೇಧಗಳನ್ನು ವಿಧಿಸಿದೆ. ಕೆಲವು ಸಂಬಂಧಗಳಲ್ಲಿರುವ ವ್ಯಕ್ತಿಗಳು ವಿವಾಹವಾಗಕೂಡದೆಂದೂ ಕೆಲವು ಸಂಬಂಧಗಳಲ್ಲಿರುವ ವ್ಯಕ್ತಿಗಳು ವಿವಾಹವಾಗುವುದು ಮಾನ್ಯವೆಂದೂ ತಿಳಿಸಿದೆ. ಮುರ್ಡಕ್ ಎಂಬ ವಿದ್ವಾಂಸನ ಅಭಿಪ್ರಾಯದಂತೆ 250 ಸಮಾಜಗಳಲ್ಲಿ ದೊರಕಿರುವ ಆಧಾರಾಂಶಗಳನ್ನು ಪರಿಶೀಲಿಸಿದರೆ ಯಾವ ಸಮಾಜವೂ ತಂದೆ ಮಗಳಿಗೂ, ತಾಯಿ ಮಗನಿಗೂ ಸಹೋದರ ಸಹೋದರಿಯರಿಗೂ ಲೈಂಗಿಕ ಸಂಬಂಧವನ್ನು ಮಾನ್ಯ ಮಾಡಿಲ್ಲ. ಈ ನಿಷೇಧ(ಟ್ಯಾಬು) ಸಾಮಾನ್ಯವಾಗಿ ಸರ್ವವ್ಯಾಪಿಯಾಗಿದೆ. ಇದಕ್ಕೆ ಇರುವ ಪ್ರತಿಷೇಧ ವಿರಳ. ಅನೇಕ ಸಮಾಜಗಳಲ್ಲಿ ವಿವಾಹ ನಿಷೇಧ ಅವಿಭಕ್ತ ಕುಟುಂಬ ಅಥವಾ ವಿಸ್ತøತ ಕುಟುಂಬದ ಸದಸ್ಯರಿಗೂ ಅನ್ವಯಿಸುತ್ತದೆ. ಬುಡಕಟ್ಟು ಅಥವಾ ಬಣಗಳ ಮೇಲೆ ರಚಿತವಾಗಿರುವ ಸಮಾಜಗಳಲ್ಲಿ ಅಗಮ್ಯಗಮನ ನಿಷೇಧವಿದೆ. ಅನೇಕ ಸಮಾಜಗಳಲ್ಲಿ ವರ್ಗೀಕರಣ ಬಂಧುಗಳ ಹೆಸರುಗಳಿವೆ. ವರ್ಗೀಕರಣ ಬಂಧುನಾಮಗಳಿರುವ ಸಮಾಜಗಳಲ್ಲಿ ಒಬ್ಬ ಹೆಂಗಸು ತನ್ನ ಸ್ವಂತ ಸಹೋದರನ ಮತ್ತು ಬಣದ ಸಹೋದರನ ಸಂಗಡ ಏಕವಿಧ ಸಂಬಂಧವನ್ನು ಪಡೆದಿರುವಳು. ಅನೇಕ ವೇಳೆ ಸ್ವಂತ ಸಹೋದರನಿಗೂ ಬಣದ ಸಹೋದರನಿಗೂ ಒಂದೇ ಬಂಧುನಾಮವಿರುತ್ತದೆ. ಬುಡಕಟ್ಟಿನೊಳಗಿರುವ ಸದಸ್ಯರಿಗೆ ಪರಸ್ಪರ ವಿವಾಹವಿಲ್ಲ. ಇದು ಬುಡಕಟ್ಟಿನ ಮುಖ್ಯ ಲಕ್ಷಣ. ಭಿನ್ನಗೋತ್ರ ವಿವಾಹವೆಂದರೆ ತನ್ನ ಗೋತ್ರದ ಹೊರಗಡೆ ಮದುವೆಯಾಗುವುದು. ಹಿಂದೂಗಳಲ್ಲಿ ಸಗೋತ್ರ ವಿವಾಹವನ್ನು ನಿಷೇಧಿಸಿದೆ. ಒಂದೇ ಗೋತ್ರದ ಸ್ತ್ರೀಯರನ್ನೂ ಪುರುಷರನ್ನೂ ಸಹೋದರ ಸಹೋದರಿಯರೆಂದು ಪರಿಗಣಿಸಲಾಗಿದೆ. ಒಂದೇ ಗೋತ್ರಕ್ಕೆ ಸೇರಿದ ಯುವಕ ಯುವತಿಯರ ವಂಶಾವಳಿಯ ಪರಿಶೀಲನೆಯಲ್ಲಿ, ಯಾವ ಸಂಬಂಧವೂ ತೋರದಿದ್ದರೂ ತಾತ್ತ್ವಿಕವಾಗಿ ಅವರಿಬ್ಬರೂ ಒಬ್ಬ ಮೂಲ ಪುರುಷನ ಸಂತತಿಯವರಾದುದರಿಂದ ಸಹೋದರ ಸಹೋದರಿಯರೆಂದು ಭಾವಿಸಲಾಗುತ್ತದೆ. ಹಿಂದುಗಳಲ್ಲಿ ಸಪಿಂಡ ಸಂಬಂಧಿಗಳು ವಿವಾಹವಾಗಕೂಡದು. ಸಪಿಂಡ ಸಂಬಂಧಿಗಳೆಂದರೆ ತಂದೆಯ ಅಥವಾ ತಾಯಿಯ ಕಡೆಯಿಂದ ಆರು ತಲೆಮಾರಿನ ಸಂಬಂಧಿಗಳು. ಒಂದೇ ಗೋತ್ರದವರಿಗೂ ಸಪಿಂಡರಿಗೂ ವಿವಾಹ ನಿಷೇಧವಿದೆ. ಆದುದರಿಂದ ಕನ್ಯಾನ್ವೇಷಣೆ, ವರಾನ್ವೇಷಣೆ ಮಾಡುವಾಗ ಸಪಿಂಡ, ಸಗೋತ್ರದವರನ್ನು ಅರ್ಹರೆಂದು ಪರಿಗಣಿಸಲಾಗುವುದಿಲ್ಲ. 

	ಒಂದು ಬಗೆಯ ಗುಂಪಿನ ಬಂಧುಗಳೊಡನೆ ಹೇಗೆ ವಿವಾಹ ನಿಷೇಧವೋ ಹಾಗೆಯೇ ಅನೇಕ ಸಮಾಜಗಳಲ್ಲಿ ವಿವಾಹ ಕೆಲವು ಬಂಧುಗಳ ಸಂಗಡವೇ ಅಗಬೇಕೆಂಬ ನಿಯಮವಿದೆ. ಯಾವ ಗುಂಪಿನವರ ಸಂಗಡ ವಿವಾಹವಾಗಬೇಕೆಂದು ನಿರ್ದೇಶಿಸುವ ನಿಯಮಗಳು ಸಮಾಜದಿಂದ ಸಮಾಜಕ್ಕೆ ವ್ಯತ್ಯಾಸವಾಗುತ್ತವೆ. ಸಾಧಾರಣವಾಗಿ ಒಬ್ಬ ತನ್ನ ಬುಡಕಟ್ಟಿನವರ ಸಂಗಡವೇ ವಿವಾಹವಾಗಬೇಕು. ಆದರೆ ಆತ ಅದೇ ಬುಡಕಟ್ಟಿನ ತನ್ನ ಬಣದವರ ಸಂಗಡ ವಿವಾಹವಾಗಕೂಡದು. ಒಂದು ಬುಡಕಟ್ಟಿನವರು ದೂರದೂರದ ಸ್ಥಳಗಳಲ್ಲಿ ನೆಲಸಿದ್ದರೆ, ಆಗ ಬುಡಕಟ್ಟಿನ ವ್ಯವಸ್ಥೆಗಳಿಗಿಂತಲೂ ಹಳ್ಳಿಯ ವ್ಯವಸ್ಥೆ ಪ್ರಬಲಿಸಿ ಒಂದು ಹಳ್ಳಿಯಲ್ಲಿ ವಾಸಿಸುವವರ ಸಂಗಡವಾಗಲಿ ಅಥವಾ ಹತ್ತಿರದ ಹಳ್ಳಿಯಲ್ಲಿರುವವರ ಸಂಗಡವಾಗಲಿ ವಿವಾಹವಾಗುವ ಪದ್ಧತಿಗಳು ತಲೆದೋರುವ ಸಾಧ್ಯತೆಯಿದೆ. ಇಂಥ ಸಂದರ್ಭಗಳಲ್ಲಿ ದೂರದಲ್ಲಿ ವಾಸವಾಗಿರುವ ಕುಲದವರ ಸಂಗಡ ಮೈತ್ರಿ ಇರುವುದಿಲ್ಲ. ಹಲವು ಬಾರಿ ಅವರ ಮೇಲೆ ಶಂಕೆ ಉದ್ಭವಿಸಬಹುದು. ಅಸ್ಸಾಮಿನ ಒಳನಾಡಿನ ಹಳ್ಳಿಗಳಲ್ಲಿ ವಾಸಮಾಡುವ ಅಭೋರರಲ್ಲಿ, ಒಂದು ಹಳ್ಳಿಯಲ್ಲಿ ವಾಸಮಾಡುವ ಪುರುಷರು ಮತ್ತು ಸ್ತ್ರೀಯರಲ್ಲಿ ಮಾತ್ರ ವಿವಾಹ ಸಾಧ್ಯ. ಆದರೆ ಕಾಲಕ್ರಮೇಣ ಹೊರಗಿನ ಜನರ ಸಂಪರ್ಕ ಬೆಳೆದ ಹಾಗೆ, ಗ್ರಾಮಸದಸ್ಯರ ಸಂಗಡ ವಿವಾಹವಾಗಬೇಕೆಂಬ ನಿರ್ಬಂಧ ಸಡಿಲವಾಗುವುದು ಸಾಧ್ಯ. ಅಭೋರ್ ಗುಡ್ಡಗಳ ತಗ್ಗು ಪ್ರದೇಶದ ಹಳ್ಳಿಗಳಲ್ಲಿ ವಾಸಿಸುವವರು ಬೇರೆ ಹಳ್ಳಿಯವರೊಂದಿಗೆ ವಿವಾಹ ಸಂಬಂಧವನ್ನು ಬೆಳೆಸುವ ವಾಡಿಕೆಯಿದೆ. ಆದರೆ ಅವರು ತಮ್ಮ ಬುಡಕಟ್ಟಿನವರನ್ನು ಮಾತ್ರ ಮದುವೆಯಾಗುತ್ತಾರೆ.

	ಹಿಂದುಗಳ ವಿವಾಹದಲ್ಲಿ ಜಾತಿ ಪ್ರಮುಖವಾಗಿದೆ. ಹಿಂದು ಸಮಾಜದಲ್ಲಿ ಅನೇಕ ಜಾತಿಗಳಿವೆ. ಪ್ರತಿಯೊಬ್ಬ ಹಿಂದು ಯಾವುದಾದರೊಂದು ಜಾತಿಗೆ ಸೇರಿದವನು. ಆತ ತನ್ನ ಜಾತಿಯ ಸದಸ್ಯರ ಸಂಗಡ ವಿವಾಹವಾಗಬೇಕೆಂಬ ನಿಯಮವಿದೆ. ಸಂಪ್ರದಾಯದ ಪ್ರಕಾರ ಒಬ್ಬ ಮನುಷ್ಯ ಬೇರೊಂದು ಜಾತಿಗೆ ಸೇರಿದ ಸ್ತ್ರೀಯನ್ನು ವಿವಾಹವಾಗಕೂಡದು. ಯುರೋಪ್ ಮತ್ತು ಅಮೆರಿಕದ ಸಮಾಜಗಳಲ್ಲಿ ಗುಂಪುಗಳ ಆಧಾರದ ಮೇಲೆ ವಿವಾಹ ನಿಷೇಧವಿಲ್ಲ. ಆದರೆ ಅಲ್ಲಿ ಬಣ್ಣದ ಆಧಾರದ ಮೇಲೆ ವಿವಾಹ ನಿಷೇಧಗಳಿವೆ. ಮತ, ಪಂಗಡ, ಭಾಷೆ ಮೊದಲಾದ ವಿಷಯಗಳನ್ನು ಪರಿಶೀಲಿಸಿ ವಿವಾಹಗಳು ನಿಷ್ಕರ್ಷೆಯಾಗುತ್ತವೆ. ಒಬ್ಬ ವ್ಯಕ್ತಿ ಮತ, ಪಂಗಡ, ಭಾಷೆಗಳನ್ನು ಬದಿಗೊತ್ತಿ ವಿವಾಹವಾದರೆ, ಆತ ತನ್ನ ಕುಟುಂಬದ ಸದಸ್ಯರ ಆಗ್ರಹಕ್ಕೆ ಗುರಿಯಾಗುತ್ತಾನೆ. ಆದರೆ ಆಧುನಿಕ ಪಾಶ್ಚಾತ್ಯ ಸಮಾಜಗಳಲ್ಲಿ ಜನಾಂಗಗಳ ಪರಸ್ಪರ ಸಂಬಂಧ ಹೆಚ್ಚುತ್ತಿರುವುದರಿಂದ ಸುಲಭವಾಗಿ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ. ಆದುದರಿಂದ ಬೇರೆ ಬೇರೆ ಗುಂಪುಗಳಲ್ಲಿರುವ ಜನರ ಸಂಗಡ ವಿವಾಹಗಳು ಹೆಚ್ಚುತ್ತಿವೆ. ಆದರೆ ಕಪ್ಪು ಮತ್ತು ಬಿಳಿಯ ಜನಾಂಗಗಳ ಸದಸ್ಯರ ನಡುವೆ ವಿವಾಹಕ್ಕೆ ನಿಷೇಧಗಳಿವೆ. ಅಮೆರಿಕದ ಬಿಳಿಯರು ಮತ್ತು ನಿಗ್ರೋಗಳು ತಮ್ಮ ಗುಂಪಿನವರ ಜೊತೆಯೇ ವಿವಾಹವಾಗಬೇಕೆಂಬ ನಿರ್ಬಂಧಗಳಿವೆ. ಹಿಂದು ಸಮಾಜದಲ್ಲಿ ವಿಧಿಸಿರುವ ಅಂತರಜಾತಿ ವಿವಾಹದ ಕಾನೂನುಗಳು, ಆ ಬಗೆಯ ವಿವಾಹಗಳನ್ನು ಮಾನ್ಯ ಮಾಡಿದ್ದರೂ ವಿವಾಹ ವ್ಯವಸ್ಥೆಯಲ್ಲಿ ಜಾತಿಯ ಪ್ರಾಮುಖ್ಯ ತಗ್ಗಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಾನೂನುಗಳು ಅಂತರ ಜನಾಂಗದ ವಿವಾಹಗಳಿಗೆ ಮಾನ್ಯತೆ ಕೊಟ್ಟಿದ್ದರೂ ಅಂಥ ಮದುವೆಗಳು ಜರುಗಿದಾಗ ಸಮಾಜ ತೀವ್ರವಾಗಿ ವಿರೋಧಿಸುತ್ತದೆ. ಕೆಲವು ಬಾರಿ ಅಂಥ ವಿವಾಹಗಳಿಂದ ಅಂತರ್‍ಜನಾಂಗ ಘರ್ಷಣೆಗಳೂ ನಡೆಯುವುದುಂಟು. 

	ಅನೇಕ ಸಮಾಜಗಳಲ್ಲಿ ಕೆಲವು ಸಂಬಂಧಿಗಳ ವಿವಾಹ ಹೆಚ್ಚು ವಿಶ್ವಾಸ ಗಳಿಸಿ ರೂಢಿಯಲ್ಲಿದೆ. ಬಣಗಳ ಆಧಾರದ ಮೇಲೆ ವಿಭಾಗವಾಗಿರುವ ಸಮಾಜಗಳಲ್ಲಿ ವಿಷಮರಕ್ತ ಸಂಬಂಧಿಗಳ ವಿವಾಹ ಪದ್ಧತಿ ಹೆಚ್ಚು ವಿಶ್ವಾಸ ಗಳಿಸಿದೆ. ತಾಯಿಯ ಸಹೋದರನ (ಸೋದರಮಾವ) ಗಂಡು ಮತ್ತು ಹೆಣ್ಣುಮಕ್ಕಳೂ ತಂದೆಯ ಸಹೋದರಿಯ (ಸೋದರತ್ತೆ) ಗಂಡು ಮತ್ತು ಹೆಣ್ಣುಮಕ್ಕಳೂ ಪರಸ್ಪರ ವಿಷಮರಕ್ತ ಸಂಬಂಧಿಗಳು. ತಂದೆಯ ಸಹೋದರನ ಗಂಡು ಮತ್ತು ಹೆಣ್ಣುಮಕ್ಕಳೂ ತಾಯಿಯ ಸಹೋದರಿಯ ಗಂಡು ಮತ್ತು ಹೆಣ್ಣುಮಕ್ಕಳೂ ಸಾದೃಶ್ಯ ರಕ್ತಸಂಬಂಧಿಗಳು. ಸಾದೃಶ್ಯರಕ್ತ ಸಂಬಂಧಿಗಳಲ್ಲಿ ವಿವಾಹವನ್ನು ಬಹಳಷ್ಟು ಸಮಾಜಗಳು ನಿಷೇಧಿಸಿವೆ. ಆದರೆ ಈ ಪದ್ಧತಿ ಕೆಲವು ಸಮಾಜಗಳಲ್ಲಿ ವಾಡಿಕೆಯಲ್ಲಿದೆ. ಇಂಥ ಸಮಾಜಗಳಲ್ಲಿ ಮುಸ್ಲಿಂ ಸಮಾಜ ಮುಖ್ಯವಾದುದು. ವಿಷಮರಕ್ತಸಂಬಂಧಿಗಳ ವಿವಾಹ ಪ್ರಪಂಚದ ಎಲ್ಲ ಭಾಗಗಳಲ್ಲಿ ರೂಢಿಯಲ್ಲಿದೆ. “ವಿಷಮರಕ್ತಸಂಬಂಧಿಗಳ ವಿವಾಹ ತಾತ್ತ್ವಿಕವಾಗಿ ಎರಡು ವಿಧವಾಗಿರಬಹುದು. ಒಬ್ಬ ಮನುಷ್ಯ ತನ್ನ ತಾಯಿಯ ಸಹೋದರನ ಮಗಳನ್ನಾಗಲೀ ಅಥವಾ ತಂದೆಯ ಸಹೋದರಿಯ ಮಗಳನ್ನಾಗಲೀ ಮದುವೆಯಾಗಬಹುದು. ಕೆಲವು ಬುಡಕಟ್ಟುಗಳಲ್ಲಿರುವ ವಾಡಿಕೆಯಂತೆ ತಾಯಿಯ ಸಹೋದರ ತಂದೆಯ ಸಹೋದರಿಯನ್ನು ಮದುವೆಯಾಗುವುದರಿಂದ ವಿಷಮ ಸಂಬಂಧಿಗಳ ಎರಡು ವಿವಾಹಗಳೂ ತಾಳೆ ಬೀಳಬಹುದು. ಎಲ್ಲಿ ಈ ರೀತಿಯ ವಿವಾಹವಿಲ್ಲವೊ, ಅಲ್ಲಿ ಒಬ್ಬ ಮನುಷ್ಯ ಸೋದರಮಾವನ ಮಗಳನ್ನು ಮದುವೆಯಾಗುವ ವಾಡಿಕೆ ಹೆಚ್ಚಾಗಿರುತ್ತದೆ” ಎಂದು ರಾಬರ್ಟ್ ಲೋವಿ ಅಭಿಪ್ರಾಯಪಟ್ಟಿದ್ದಾನೆ. 

	ಇಬ್ಭಾಗ ವ್ಯವಸ್ಥೆಯುಳ್ಳ ಸಮಾಜಗಳಲ್ಲಿ ವಾಡಿಕೆಯಲ್ಲಿರುವ ವಿಷಮರಕ್ತ ಸಂಬಂಧಿಗಳ ವಿವಾಹದ ಕಾರಣವನ್ನು ಸುಲಭವಾಗಿ ಕಾಣಬಹುದು. ಇಂಥ ಸಮಾಜಗಳಲ್ಲಿ ಬಹಿರ್‍ಗೋತ್ರ ವಿವಾಹಗಳು ಮಾತ್ರ ಸಾಧ್ಯ. ಒಂದು ಗುಂಪಿನಲ್ಲಿರುವ ಸ್ತ್ರೀಯರು ಮತ್ತು ಪುರುಷರು ವರ್ಗೀಕರಣ ಸಹೋದರ ಸಹೋದರಿಯರು. ಇವರಲ್ಲಿ ವಿವಾಹ ಸಾಧ್ಯವಿಲ್ಲ. ಇಬ್ಭಾಗ ವ್ಯವಸ್ಥೆಯುಳ್ಳ ಸಮಾಜದಲ್ಲಿ, ಒಬ್ಬ ವ್ಯಕ್ತಿಯ ತಾಯಿ, ಬುಡಕಟ್ಟಿನ ಬೇರೊಂದು ಅರ್ಧ ಭಾಗದಿಂದ ಬಂದವಳು. ಆತನ ತಾಯಿಯ ಸಹೋದರ ಆ ಭಾಗದಲ್ಲಿಯೇ ಇರುತ್ತಾನೆ. ವ್ಯಕ್ತಿಯ ತಂದೆಯ ತಂಗಿ ಮದುವೆಯಾಗಬೇಕಾದಾಗ ಅವಳು ಹುಟ್ಟಿರುವ ಬಣದವರನ್ನು ಮದುವೆಯಾಗುವಂತಿಲ್ಲ. ಆಕೆ ಇನ್ನೊಂದು ಅರ್ಧ ಭಾಗದಲ್ಲಿರುವ ಪುರುಷನನ್ನು ಮದುವೆಯಾಗಬೇಕು. ಆ ಪುರುಷ ತಾಯಿಯ ಸಹೋದರನಾಗಬಹುದು. ವ್ಯಕ್ತಿಯ ತಲೆಮೊರೆಯಲ್ಲಿರುವವರೆಲ್ಲರೂ ತನ್ನ ಸೋದರಮಾವನ ಮಕ್ಕಳ ಗುಂಪಿಗೆ ಸೇರಿದವರು ಅಥವಾ ವ್ಯಕ್ತಿಯ ಸೋದರತ್ತೆಯ ಮಕ್ಕಳ ಗುಂಪಿಗೆ ಸೇರಿದವರು (ವ್ಯಕ್ತಿಯ ಬೇರೊಂದು ಅರ್ಧದಲ್ಲಿರುವ ತಲೆಮೊರೆಯವರೆಲ್ಲರೂ ಆತನ ಸೋದರಮಾವನ ಅಥವಾ ಸೋದರತ್ತೆಯ ಮಕ್ಕಳ ಗುಂಪಿಗೆ ಸೇರಿದವರು) ವಿವಾಹವಾಗಬೇಕಾಗಿ ಬಂದಾಗ, ಈ ಗುಂಪಿನಲ್ಲಿಯೇ ವಿವಾಹವಾಗಬೇಕು. ಆತ ಮದುವೆಯಾಗುವ ಹೆಣ್ಣು ನಿಜವಾದ ವಿಷಮರಕ್ತಸಂಬಂಧಿ ಅಥವಾ ವರ್ಗೀಕರಣ ವಿಷಮರಕ್ತ ಸಂಬಂಧಿಯಾಗಬೇಕು. 

	ವಿಷಮರಕ್ತಸಂಬಂಧಿಗಳ ವಿವಾಹಗಳು ವಾಡಿಕೆಯಲ್ಲಿರುವ ಸಮಾಜಗಳ ರಚನೆ ತುಂಬ ಸಂಕೀರ್ಣವಾದುದು. ಶ್ರೀಲಂಕಾದ ವಡ್ಡ ಜನರಲ್ಲಿ ಮತ್ತು ಆಸ್ಟ್ರೇಲಿಯದ ಖರೀರ ಜನರಲ್ಲಿ ಇಬ್ಭಾಗ ಸಮಾಜ ವ್ಯವಸ್ಥೆ ಇದೆ. ಆದರೆ ಅನೇಕ ಸಮಾಜಗಳು ಹಲವು ಬಣಗಳನ್ನೊಳಗೊಂಡು ಸಮ್ಮಿಶ್ರ ವ್ಯವಸ್ಥೆಯಿಂದಿದ್ದರೂ ವಿಷಮರಕ್ತಸಂಬಂಧಿಗಳ ವಿವಾಹಗಳನ್ನು ವಿಶೇಷವಾಗಿ ಆಚರಿಸುವುವು. ಇಂಥ ಸಮಾಜಗಳಲ್ಲಿ, ಒಬ್ಬ ತನ್ನ ಬುಡಕಟ್ಟಿನ ಯಾವುದಾದರೂ ಬೇರೊಂದು ಬಣದ ಹೆಣ್ಣನ್ನು ಮದುವೆಯಾಗಬಹುದು. ಆದರೆ ಆತ ಮದುವೆಯಾಗುವ ಹೆಣ್ಣು ತನ್ನ ತಂದೆಯ ಸಹೋದರಿಯ ಮಗಳೂ ತಾಯಿಯ ಸಹೋದರನ ಮಗಳೂ ಒಬ್ಬಳೇ ಆಗಿರಬೇಕಾಗಿಲ್ಲ. ಭಾರತದ ಮುರಿಯ, ಗೊಂಡ, ಖಾರಿಯರ್, ಓರಾನ್, ಕನಿಕ್ಕರ್ ಮೊದಲಾದ ಅನೇಕ ಆದಿವಾಸಿಗಳು ವಿಷಮರಕ್ತಬಂಧುಗಳ ವಿವಾಹವನ್ನು ಆಚರಿಸುವರು. ಇವರ ಸಮಾಜ ಅನೇಕ ಬಣಗಳಿಂದ ಕೂಡಿದೆ. 

	ದಕ್ಷಿಣ ಭಾರತದ ಅನೇಕ ಜಾತಿಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಕರ್ನಾಟಕದಲ್ಲಿ ವಿಷಮರಕ್ತ ಸಂಬಂಧಿಗಳ ವಿವಾಹವಲ್ಲದೆ, ಸೋದರಮಾವ ಮತ್ತು ಸೋದರಸೊಸೆಯರ ವಿವಾಹ ವಾಡಿಕೆಯಲ್ಲಿದೆ. ಒಬ್ಬ ವ್ಯಕ್ತಿ ತನ್ನ ಅಕ್ಕನ ಮಗಳನ್ನು ಮದುವೆಯಾಗಬಹುದು. ಕೆಲವು ಜಾತಿಯವರಲ್ಲಿ ಬಾಗಿಲನ್ನು ತಡೆಯುವ ಶಾಸ್ತ್ರ ಮಾಡುವಾಗ ಅಕ್ಕ ತನ್ನ ಮಗಳನ್ನು ತಮ್ಮನಿಗೆ ವಿವಾಹ ಮಾಡಿಕೊಡುವುದಾಗಿ ವಾಗ್ದಾನ ಮಾಡುವಳು. ಹಾಗೆಯೇ ತಮ್ಮ ತನ್ನ ಅಕ್ಕನ ಮಗಳನ್ನು ಮದುವೆಯಾಗುವೆನೆಂದು ವಾಗ್ದಾನ ಮಾಡುವನು.

	ವಿವಾಹ ವಿಧಗಳು: ಒಬ್ಬ ವ್ಯಕ್ತಿ ಪಡೆದಿರುವ ಸಂಗಾತಿಗಳ ಸಂಖ್ಯಾನುಗುಣವಾಗಿ ವಿವಾಹಗಳಲ್ಲಿ ಮೂರು ವಿಧಗಳಿವೆ - ಏಕಪತ್ನಿತ್ವ, ಬಹುಪತ್ನಿತ್ವ ಹಾಗೂ ಬಹುಪತಿತ್ವ. ಒಬ್ಬ ಪುರುಷ ಒಬ್ಬ ಸ್ತ್ರೀಯನ್ನು ಮಾತ್ರ ವಿವಾಹವಾಗುವ ಪದ್ಧತಿ ಏಕಪತ್ನಿತ್ವ (ಮಾನೊಗಮಿ), ಒಬ್ಬ ಪುರುಷ ಇಬ್ಬರು ಅಥವಾ ಹೆಚ್ಚು ಸ್ತ್ರೀಯರನ್ನು ವಿವಾಹವಾಗುವ ಪದ್ಧತಿ ಬಹುಪತ್ನಿತ್ವ (ಪಾಲಿಗಮಿ), ಒಂದು ಹೆಣ್ಣು ಬಹು ಗಂಡುಗಳನ್ನು ಮದುವೆಯಾಗುವ ಪದ್ಧತಿ ಬಹುಪತಿತ್ವ (ಪಾಲಿಯಾಂಡ್ರಿ). ಈ ಮೂರು ವಿವಾಹ ವಿಧಗಳಲ್ಲಿ ಯಾವುದು ಮೊದಲು ಆಚರಣೆಯಲ್ಲಿದ್ದಿತೆಂಬ ವಿಷಯ ಚರ್ಚಾಸ್ಪದವಾಗಿದೆ. ಬಹುಪತ್ನಿತ್ವ ಮತ್ತು ಬಹುಪತಿತ್ವ ಪದ್ಧತಿಗಳು ಬಹುವಿವಾಹದ ಎರಡು ರೂಪಗಳು. 

	ಕ್ರೈಸ್ತ ಸಮಾಜ ಏಕಪತ್ನಿತ್ವದ ಆದರ್ಶವನ್ನು ಹೊಂದಿದ್ದುದರಿಂದ, ಸಮಾಜ ವಿಕಾಸದಲ್ಲಿ ಏಕಪತ್ನಿತ್ವಕ್ಕೆ ಮೊದಲು, ಬಹುಪತ್ನಿತ್ವವಿತ್ತೆಂಬ ಅಭಿಪ್ರಾಯ ಆರಂಭದ ಮಾನವಶಾಸ್ತ್ರಜ್ಞರದು. ಆದರೆ ಅನಂತರದ ಅನೇಕ ಸಮಾಜಗಳ ಸುವ್ಯವಸ್ಥಿತ ಅಧ್ಯಯನ ಈ ಅಭಿಪ್ರಾಯಕ್ಕೆ ವಿರೋಧವಾದ ಅಂಶಗಳನ್ನು ವ್ಯಕ್ತಪಡಿಸಿತು. ಹಾಬ್‍ಹೌಸ್, ವೀಲರ್, ಗಿನ್ಸ್‍ಬರ್ಗ್ - ಈ ವಿದ್ವಾಂಸರು ಸಮಾಜದಲ್ಲಿ ಕೆಲವು ಸಂಸ್ಥೆಗಳಲ್ಲಿ ಆಗುವ ಬದಲಾವಣೆಗಳು ಸಮಾಜದ ಉಳಿದ ಸಂಸ್ಥೆಗಳ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಪರೀಕ್ಷಿಸಿದರು. ಅವರು ಅಧ್ಯಯನಕ್ಕೆ 646 ಸಮಾಜಗಳನ್ನು ಆರಿಸಿಕೊಂಡರು. ಈ ಸಮಾಜಗಳನ್ನು, ಅಲ್ಲಿಯ ಜನರು ಉಪಯೋಗಿಸುತ್ತಿದ್ದ ಉಪಕರಣಗಳು, ಆಹಾರ ಗಳಿಸುತ್ತಿದ್ದ ರೀತಿ ಮತ್ತು ಜೀವನದ ರೀತಿ - ಈ ಆಧಾರಗಳ ಮೇಲೆ ಸ್ಥೂಲವಾಗಿ ಮೂರು ಗುಂಪುಗಳಾಗಿ ವಿಂಗಡಿಸಿದರು. ಬೇಟೆಯಾಡುವ ಸಮಾಜ, ಕೃಷಿ ಸಮಾಜ ಮತ್ತು ಪಶುಪಾಲನಾ ಅಥವಾ ಹುಲ್ಲುಗಾವಲಿನ ಸಮಾಜ. ಇವುಗಳಲ್ಲಿ ಬೇಟೆಯಾಡುವ ಸಮಾಜದ ಜೀವನ ತುಂಬ ಸರಳವಾದದ್ದು. ಆದರೆ ಪಶುಪಾಲನಾ ಮತ್ತು ಕೃಷಿ ಸಮಾಜಗಳು ಸಂಕೀರ್ಣ ವ್ಯವಸ್ಥೆಗಳಿಂದ ಕೂಡಿವೆ. ಈ ಮೂರು ಸಮಾಜಗಳನ್ನು ಪುನಃ ಹಲವು ವಿಧಗಳನ್ನಾಗಿ ವಿಭಾಗಿಸಲಾಗಿದೆ. ಬೇಟೆಗಾರರ ಸಮಾಜವನ್ನು ಮೇಲ್ಮಟ್ಟದ ಬೇಟೆಗಾರರು, ಕೆಳಮಟ್ಟದ ಬೇಟೆಗಾರರೆಂದು ಎರಡು ವಿಧವಾಗಿ ವಿಂಗಡಿಸಿರುವರು. ಕೃಷಿ ಸಮಾಜವನ್ನು ಕೃಷಿ ಒಂದು, ಕೃಷಿ ಎರಡು ಮತ್ತು ಕೃಷಿ ಮೂರು ಎಂದು ಮೂರು ಭಾಗಗಳಾಗಿಯೂ ಪಶುಪಾಲನಾ ಸಮಾಜವನ್ನು ಪಶುಪಾಲನೆ ಒಂದು, ಪಶುಪಾಲನೆ ಎರಡು ಎಂದು ಎರಡು ಭಾಗಗಳಾಗಿಯೂ ವಿಭಾಗಿಸಲಾಗಿದೆ. ಏಕಪತ್ನಿತ್ವಕ್ಕೂ ಸಮಾಜದ ಭೌತ ಸಂಸ್ಕøತಿಗೂ ನಿರ್ದುಷ್ಟವಾದ ಪರಸ್ಪರ ಸಂಬಂಧವಿಲ್ಲ. ಆದರೆ ಏಕಪತ್ನಿತ್ವ ಒಂದು ವಿಭಾಗದ ಕೃಷಿ ಸಮಾಜಗಳಲ್ಲಿ ಹೆಚ್ಚಾಗಿ ರೂಢಿಯಲ್ಲಿದ್ದು, ಪಶುಪಾಲನಾ ಸಮಾಜಗಳಲ್ಲಿ ಬಹುಮಟ್ಟಿಗೆ ಶೂನ್ಯವಾಗಿತ್ತು. ಮೇಲೆ ಹೇಳಿರುವ ಸಮಾಜ ವಿಭಾಗಗಳ ಶ್ರೇಣಿಯಲ್ಲಿ ಹಂತಹಂತವಾಗಿ ಮೇಲಕ್ಕೆ ಹೋದಂತೆ ತೆರಕೊಡುವುದು, ಹೆಣ್ಣಿಗೆ ಕೊಡುಗೆ ನೀಡಿ ವಿವಾಹವಾಗುವ ಪದ್ಧತಿಗಳು ಹೆಚ್ಚಾಗಿ ಕಾಣಬರುತ್ತವೆ. ಬಹುಪತ್ನಿಯರನ್ನು ಹೊಂದಿರುವುದು, ಮದುವೆಯ ಕೊಡುಗೆಗಳನ್ನು ವಿನಿಮಯ ಮಾಡುವುದು, ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಗಣ್ಯತೆಯನ್ನು ಪಡೆಯಲು ಸಹಕಾರಿಗಳಾಗುತ್ತವೆ ಎಂದು ಭಾವಿಸಲಾಗುತ್ತಿತ್ತು. 

	ಮುರ್ಡಕ್ ಎಂಬ ವಿದ್ವಾಂಸ ಪರಿಶೀಲಿಸಿದ 250 ಸಮಾಜಗಳ ಪೈಕಿ 43 ಸಮಾಜಗಳಲ್ಲಿ ಮಾತ್ರ ನಿಯಮಿತ ಏಕಪತ್ನಿತ್ವವೂ 195 ಸಮಾಜಗಳಲ್ಲಿ ಮಿತವಾದ ಬಹುಪತ್ನಿತ್ವವೂ ಆಚರಣೆಯಲ್ಲಿದ್ದವು. ಅನೇಕ ಸಮಾಜಗಳಲ್ಲಿ ಬಹು ವಿವಾಹ ಪದ್ಧತಿಗೆ ಅನುಮತಿ ಇದ್ದರೂ ಏಕ ವಿವಾಹದ ಸೌಕರ್ಯಗಳನ್ನು ಪರಿಶೀಲಿಸಿ, ಅದನ್ನೇ ಅನುಸರಿಸಿರುವುದು ಕಂಡುಬರುತ್ತದೆ. ಗೊಂಡ, ಮುರಿಯ, ಬೈಗ, ಲೂಶಿಯ, ನಾಗ ಮತ್ತು ಅಭೋರ - ಇವರಲ್ಲಿ ಕೆಲವರು ಇಬ್ಬರು ಪತ್ನಿಯರನ್ನು ಹೊಂದಿದ್ದರು. ಒಬ್ಬ ಅಭೋರ ಮೊದಲನೆಯ ಪತ್ನಿಯಲ್ಲಿ ಮಕ್ಕಳಾಗದಿದ್ದಾಗ ಮಾತ್ರ ಎರಡನೆಯ ಹೆಂಡತಿಯನ್ನು ಮದುವೆಯಾಗುತ್ತಿದ್ದ; ಬೇರಾವ ಕಾರಣದಿಂದಲೂ ಆತ ಎರಡನೆಯ ಪತ್ನಿಯನ್ನು ಹೊಂದುವ ಹಾಗಿರಲಿಲ್ಲ. 

	ಬಹುಪತಿತ್ವ : ಒಬ್ಬಳೇ ಸ್ತ್ರೀ ಇಬ್ಬರು ಅಥವಾ ಹೆಚ್ಚು ಪತಿಯರನ್ನು ಹೊಂದಿರುವುದು. ಒಂದೇ ಕುಟುಂಬದ ಅಣ್ಣತಮ್ಮಂದಿರು ಒಟ್ಟಾಗಿ ಆ ಸ್ತ್ರೀಯನ್ನು ವಿವಾಹವಾಗಿದ್ದರೆ ಅವರಲ್ಲೊಬ್ಬ ಅವಳನ್ನು ವಿಧ್ಯುಕ್ತವಾಗಿ ವಿವಾಹವಾಗಿದ್ದರೆ ಉಳಿದ ಸಹೋದರರೂ ಅವಳ ಗಂಡಂದಿರೆಂದು ಪರಿಗಣಿಸಲಾಗುತ್ತಿದ್ದರೆ, ಅದು ಭಾತೃಕ ಅಥವಾ ಸಹೋದರ ಬಹುಪತಿತ್ವ. ಅವರು ಇತರರಾಗಿದ್ದರೆ ಅದು ಸಹೋದರೇತರ ಬಹುಪತಿತ್ವ. ಬಹುಪತಿತ್ವ ಬಹು ಪ್ರಾಚೀನವೆಂದೂ ವಿವಾಹ ಸಂಸ್ಥೆಯ ವಿಕಾಸದಲ್ಲಿ ಅನಿರ್ಬಂಧಿತ ಲೈಂಗಿಕತೆ, ಸಾಮೂಹಿಕ ವಿವಾಹ ಹಂತಗಳ ಅನಂತರ ರೂಢಿಗೆ ಬಂದಿರಬೇಕೆಂದೂ ವಿಕಾಸವಾದಿಗಳು ಹೇಳಿದರೂ ಈ ಅಭಿಪ್ರಾಯಕ್ಕೆ ಸಾಕಷ್ಟು ಮನ್ನಣೆ ದೊರೆತಿಲ್ಲ. ಏನಿದ್ದರೂ ಇದೊಂದು ವಿರಳ ಪ್ರಕಾರ. ಮುರ್ಡಕ್ ಎಂಬ ವಿದ್ವಾಂಸನ ಸಮೀಕ್ಷೆಯಂತೆ ಪ್ರಪಂಚದ ಕೇವಲ ಒಂದು ಪ್ರತಿಶತದಷ್ಟು ಸಮಾಜಗಳು ಬಹುಪತಿತ್ವಕ್ಕೆ ಅನುಮತಿ ಕೊಡುತ್ತವೆ. ಹಿಮಾಲಯ ಪರ್ವತಶ್ರೇಣಿಯ ಟಿಬೇಟಿಯನ್ನರು, ದಕ್ಷಿಣ ಭಾರತದ ನೀಲಗಿರಿ ಬೆಟ್ಟದ ತೊದವ, ಕೋತ ಹಾಗೂ ಕೇರಳದ ನಾಯರ್ ಜನ, ಡೆಹರಾಡೂನಿನ ಖಾಸಾ ಜನ, ಉತ್ತರ ಅಮೆರಿಕದ ಎಸ್ಕಿಮೋ ಈ ಪದ್ಧತಿಯನ್ನು ಅನುಮತಿಸಿವೆ. ಆದರೆ ಇಲ್ಲಿಯೂ ಸಂಖ್ಯಾ ದೃಷ್ಟಿಯಿಂದ ನೋಡಿದರೆ ಏಕಪತ್ನಿ ವಿವಾಹಗಳೇ ಹೆಚ್ಚು. 

	ಬಹುಪತಿತ್ವ ಪದ್ಧತಿಗೆ ಕಾರಣಗಳನ್ನು ಖಚಿತವಾಗಿ ಹೇಳುವುದು ಕಷ್ಟ. ಆದರೆ ಈ ಪದ್ಧತಿ ರೂಢಿಯಲ್ಲಿರುವ ಹೆಚ್ಚಿನ ಉದಾಹರಣೆಗಳು ಕಂಡುಬಂದಿರುವುದು ಹಿಮಾಚ್ಛಾದಿತ ಪ್ರದೇಶಗಳಲ್ಲಿ ಅಥವಾ ಏನೂ ಆಹಾರ ಬೆಳೆಯದ ದುರ್ಗಮ ಭೂಭಾಗಗಳಲ್ಲಿ. ಕಠಿಣ ಜೀವನ ಪರಿಸ್ಥಿತಿಗಳಲ್ಲಿ ಹೆಣ್ಣು ಹೊರೆಯಾಗುವುದರಿಂದ ಇಂಥ ಪ್ರದೇಶಗಳಲ್ಲಿ ಹೆಣ್ಣುಶಿಶುಹತ್ಯಾಪದ್ಧತಿ ಕಂಡುಬಂದಿದೆ. ಇದರಿಂದಾಗಿ ಸ್ತ್ರೀಪುರುಷರ ಪ್ರಮಾಣಗಳಲ್ಲಿ ಅಸಮತೋಲವುಂಟಾಗಿ ಬಹುಪತಿತ್ವ ಪದ್ಧತಿ ಪ್ರಾರಂಭವಾಗಿರುವ ಸಾಧ್ಯತೆಗಳು ಹೆಚ್ಚು. ಆದರೆ ಇದೊಂದೇ ಕಾರಣವಲ್ಲ. ಸಮಾಜಗಳು ಈ ಪದ್ಧತಿಯಿಂದ ಹಲವು ಅನುಕೂಲತೆಗಳನ್ನು ಕಂಡುಕೊಂಡಿರಬಹುದು. ಅವಿವಾಹಿತ ಪುರುಷರ ಸಂಖ್ಯೆ ಹೆಚ್ಚಾದಾಗ ಅಥವಾ ಅವಲಂಬಿತ ಮಕ್ಕಳ ಸಂಖ್ಯೆ ಹೆಚ್ಚಿ ದುಡಿಯುವ ಹಿರಿಯರಿಗೆ ಭಾರವೆನಿಸಿದಾಗ ಈ ಪದ್ಧತಿ ಅನುಕೂಲ. ಈ ವಿವಾಹದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದ್ದು ಪಾಲನೆ ಪೋಷಣೆ ಸುಲಭಸಾಧ್ಯ. ಕೃಷಿಯೋಗ್ಯವಾದ ಕುಟುಂಬದ ಭೂಮಿ ಅಣ್ಣತಮ್ಮಂದಿರಲ್ಲಿ ಒಡೆದುಹೋಗದೆ ಇಡಿಯಾಗಿ ಉಳಿಯುತ್ತದೆ. ಅಲ್ಲದೆ ಹೆಂಡಿರುಗಳ ಒಳಜಗಳಗಳೂ ಇರುವುದಿಲ್ಲ. ಉಳಿದ ಅಣ್ಣತಮ್ಮಂದಿರು ದೀರ್ಘಕಾಲ ಆಹಾರಸಂಗ್ರಹಣೆ, ಯುದ್ಧ ಇತ್ಯಾದಿಗಳಿಗಾಗಿ ದೂರವಿದ್ದಾಗ ಅವರಲ್ಲೊಬ್ಬ ಕುಟುಂಬದ ರಕ್ಷಣೆ ಮಾಡಬಹುದು. ಕೇರಳದ ನಾಯರ್ ಜನರ ಮಟ್ಟಿಗೆ ಹೇಳುವುದಾದರೆ ಅವರು ಮಾತೃವಂಶೀಯರಾಗಿರುವುದೂ ಯೋಧರಾಗಿರುವುದೂ ಬಹುಪತಿತ್ವಕ್ಕೆ ಕಾರಣವೆನ್ನಲಾಗಿದೆ. ಸ್ತ್ರೀಪುರುಷರ ಪ್ರಮಾಣ ಅಥವಾ ಜೀವನಪರಿಸ್ಥಿತಿಗಳು ಬದಲಾಗುತ್ತಿದ್ದಂತೆ ಬಹುಪತಿತ್ವ ಆಚರಣೆಗೆ ಚ್ಯುತಿಯುಂಟಾಗಿದೆಯೆಂದು ತಿಳಿದುಬರುತ್ತದೆ. 

	ಬಹುಪತಿತ್ವ ವಿವಾಹದಲ್ಲಿ ಸ್ತ್ರೀ ತನಗೆ ಬೇಕಾದ ಗಂಡನೊಡನೆ ಇರುವ ಸ್ವಾತಂತ್ರ್ಯವಿಲ್ಲ. ಕೆಲವು ಸಮಾಜಗಳಲ್ಲಿ ಅವಳು ಇನ್ನೊಂದು ಕುಟುಂಬದ ಹಿರಿಯಣ್ಣನೊಬ್ಬನನ್ನೇ ವಿವಾಹವಾಗುತ್ತಾಳೆ. ಆದರೆ ಸಂಪ್ರದಾಯದಂತೆ ಅವನ ತಮ್ಮಂದಿರೆಲ್ಲ ಅವಳ ಗಂಡಂದಿರಾಗುತ್ತಾರೆ; ಇಷ್ಟೇ ಅಲ್ಲ ಆ ತರುವಾಯ ಹುಟ್ಟಿದ ಅವರ ತಮ್ಮನೂ ಅವಳಿಗೆ ಗಂಡನೆನ್ನಿಸಿಕೊಳ್ಳುತ್ತಾನೆ ಎಂದು ನೀಲಗಿರಿಯ ತೊದವರ ವಿವಾಹಪದ್ಧತಿಯನ್ನು ಅಧ್ಯಯನ ಮಾಡಿದ ರಿವರ್ಸ್ ಎಂಬ ವಿದ್ವಾಂಸ ಅಭಿಪ್ರಾಯಪಟ್ಟಿದ್ದಾನೆ. ಸ್ತ್ರೀಯ ಗಂಡಂದಿರು ಅಣ್ಣತಮ್ಮಂದಿರಾಗಿರದಿದ್ದರೆ ಹೆಂಡತಿಗೆ ಬಿಲ್ಲುಬಾಣದ ಕಾಣಿಕೆಕೊಟ್ಟು ಧಾರ್ಮಿಕ ವಿಧಿಯೊಂದನ್ನು ನೆರವೇರಿಸುವ ಒಬ್ಬ ಗಂಡ ಈ ಬಹು ದಾಂಪತ್ಯದಲ್ಲಿ ಹುಟ್ಟಿದ ಮಕ್ಕಳ ತಂದೆ ಎನ್ನಿಸಿಕೊಳ್ಳುತ್ತಾನೆ. ಅನಂತರದಲ್ಲಿ ಇನ್ನೊಬ್ಬ ಪತಿ ಈ ವಿಧಿಯನ್ನು ನೆರವೇರಿಸಿದರೆ ಮುಂದಿನ ಸಂತಾನ ಅವನದೆಂದು ಹೇಳುತ್ತಾರೆ. ಹಾಗೆ ಯಾರೂ ನೆರವೇರಿಸದೆ ಹೋದರೆ ಮುಂದೆ ಹುಟ್ಟುವ ಮಕ್ಕಳನ್ನು ತೀರಿಹೋದ ಮೊದಲತಂದೆಯ ಮಕ್ಕಳೆಂದೇ ಪರಿಗಣಿಸಲಾಗುತ್ತದೆ. ಮಾತೃವಂಶೀಯರಾದ ನಾಯರ್ ಜನರಲ್ಲಿ ಸ್ತ್ರೀಯು ಗಂಡಂದಿರೆನ್ನಿಸಿಕೊಳ್ಳುವವರೊಡನೆ ಸರತಿಯಂತೆ ಬಾಳುವೆ ಮಾಡುತ್ತಾಳೆ. ಇದು ಸಹೋದರೇತರ ಬಹುಪತಿತ್ವ. ಬಾಣಂತಿತನದ ಖರ್ಚನ್ನು ನಿಭಾಯಿಸುವವನೇ ಈ ಸಂಬಂಧದಲ್ಲಿ ಹುಟ್ಟುವ ಮಕ್ಕಳ ತಂದೆ. ಪಿತೃತ್ವದ ಬಗ್ಗೆ ವಿವಾದವಿದ್ದರೆ ಆಗ ಅವಳು ಯಾರೊಡನಿರುತ್ತಾಳೊ ಆ ಗಂಡನೇ ಮಗುವಿನ ತಂದೆಯೆಂದು ತೀರ್ಮಾನಿಸಲಾಗುತ್ತದೆ. ಹೀಗೆ ಬಹು ಗಂಡಂದಿರನ್ನು ಹೊಂದಿದ ಸ್ತ್ರೀ ಯಾರೊಡನೆ ಇರಬೇಕು, ಹುಟ್ಟಿದ ಮಗುವಿನ ತಂದೆ ಯಾರು ಇತ್ಯಾದಿ ವಿಷಯಗಳ ಬಗ್ಗೆ ಬೇರೆ ಬೇರೆ ಜನರಲ್ಲಿ ವಿಭಿನ್ನ ಆಚರಣೆಗಳು ಕಂಡುಬರುತ್ತವೆ. 

	ಪ್ರಾಚೀನ ಭಾರತದಲ್ಲಿ ಬಹುಪತಿತ್ವದ ಕೆಲವು ವಿರಳ ಉದಾಹರಣೆಗಳು ಸಿಗುತ್ತವೆ. ಋಗ್ವೇದದಲ್ಲಿ ಒಂದು ಕಡೆ ಉಲ್ಲೇಖವಾಗಿರುವ ಗಂಡಂದಿರು ಎಂಬ ಪ್ರಸ್ತಾಪ ಬಹುಪತಿತ್ವವನ್ನು ಸೂಚಿಸುತ್ತದೆ ಎಂದು ಸರ್ಕಾರ್ ಹೇಳುತ್ತಾರೆ. ಈ ಬಗ್ಗೆ ಭಿನ್ನಾಭಿಪ್ರಾಯವಿದೆ. ಜಾತಕಕಥೆಗಳಲ್ಲಿ ರಾಜಕುಮಾರಿ ಕಣ್ಹಾ ಐವರು ಸಹೋದರರನ್ನು ಸ್ವಯಂವರ ಮಾಡಿಕೊಂಡ ಕಥೆಯಿದೆ. ಮೂರನೆಯ ಪ್ರಸಿದ್ಧ ಉದಾಹರಣೆಯೆಂದರೆ ಮಹಾಭಾರತದಲ್ಲಿ ದ್ರೌಪದಿ ಪಂಚಪಾಂಡವರನ್ನು ವರಿಸಿದ್ದು. ಪಾಂಡವರು ದ್ರಾವಿಡ ಮೂಲದವರೆಂದೂ ದ್ರಾವಿಡರಲ್ಲಿ ಈ ಪದ್ಧತಿ ಇದ್ದಿರಬಹುದೆಂದೂ ಮೇಯರ್ ಎಂಬಾತನ ತರ್ಕ. ಆರ್ಯರು, ಅದರಲ್ಲೂ ಬ್ರಾಹ್ಮಣ ಶಾಸ್ತ್ರಕಾರರು, ಈ ಬಗೆಯ ವಿವಾಹವನ್ನು ಪೂರ್ಣವಾಗಿ ವಿರೋಧಿಸಿದ್ದಾರೆ. ಸದ್ಯ ಇಸ್ಲಾಮ್ ಆದಿಯಾಗಿ ಎಲ್ಲ ಪ್ರಮುಖ ಧರ್ಮಗಳೂ ಬಹುಪತಿತ್ವವನ್ನು ನಿಷೇಧಿಸಿವೆ. ಭಾರತದ ಅನೇಕ ವಿವಾಹಶಾಸನಗಳೂ ಈ ವಿವಾಹವನ್ನು ನಿಷೇಧಿಸಿವೆ.

	ಬಹುಪತ್ನಿತ್ವ : ಪ್ರಪಂಚದ ಬಹುಸಂಖ್ಯೆಯ ವಿವಾಹಗಳು ಏಕಪತ್ನೀ ವಿವಾಹಗಳು; ಆದರೂ ಬಹಳಷ್ಟು ಸಮಾಜಗಳು ಬಹುವಿವಾಹವನ್ನು ಅನುಮತಿಸುತ್ತವೆ. ಮುರ್ಡಕ್ ಎಂಬ ಮಾನವಶಾಸ್ತ್ರಜ್ಞ ಅಧ್ಯಯನ ಮಾಡಿದ 682ರಷ್ಟು ಸಮಾಜಗಳು ಬಹುಪತ್ನಿತ್ವಕ್ಕೆ ಅನುಮತಿಸಿವೆ. ಬಹುತೇಕ ಸಮಾಜಗಳು ಏಕಪತ್ನಿತ್ವದ ಜೊತೆಗೆ ಬಹುವಿವಾಹವನ್ನು ನಿರ್ಬಂಧಿತವಾಗಿ ಮನ್ನಿಸುತ್ತವೆ. ಯುರೋಪ್, ಅಮೆರಿಕಗಳಲ್ಲಿಯ ಆಧುನಿಕ ಸಮಾಜಗಳು ಬಹುವಿವಾಹವನ್ನು ಹೆಚ್ಚೂಕಡಿಮೆ ಕೈಬಿಟ್ಟಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೂ ಈಗ ಬಹುವಿವಾಹ ಪದ್ಧತಿಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಪ್ರಾಚೀನ ಜಗತ್ತಿನ ಹಲವು ನಾಗರಿಕತೆಗಳಲ್ಲಿ ಕಂಡುಬಂದ ಬಹುಪತ್ನಿತ್ವ ಈಗ ಆಫ್ರಿಕ, ಏಷ್ಯ, ಆಸ್ಟ್ರೇಲಿಯ ಖಂಡಗಳ ಆದಿವಾಸಿ ಸಮಾಜಗಳಲ್ಲಿ ಹಾಗೂ ಇಸ್ಲಾಮ್ ಧರ್ಮಾನು ಯಾಯಿ ರಾಷ್ಟ್ರಗಳಲ್ಲಿ ಉಳಿದುಕೊಂಡಿದೆ. ಬಹುಪತ್ನಿತ್ವ ಟಿಬೇಟಿನ ಬುಡಕಟ್ಟುಗಳಲ್ಲಿ, ಉತ್ತರ ಅಮೆರಿಕದ ಎಸ್ಕಿಮೋ ಜನರಲ್ಲಿ, ನೀಲಗಿರಿಯ ತೊದವ ಮತ್ತು ಕೋತ, ಡೆಹರಾಡೂನಿನ ಖಾಸಾ ಹಾಗೂ ಕೇರಳದ ನಾಯರ್ ಜನರಲ್ಲಿ ಅಷ್ಟಿಷ್ಟು ಕಂಡುಬಂದಿದೆ.

	ಭಾರತದಲ್ಲಿ ಋಗ್ವೇದ ಕಾಲದಿಂದಲೂ ಬಹುವಿವಾಹದ ಹೇರಳ ಉದಾಹರಣೆಗಳು ದೊರಕುತ್ತವೆ. ಇವುಗಳಲ್ಲಿ ಬಹುಪತ್ನಿತ್ವದ ಉದಾಹರಣೆಗಳೇ ಹೆಚ್ಚು. ಇತರ ಪ್ರಾಚೀನ ಪಿತೃಪ್ರಧಾನ ಸಮಾಜಗಳಂತೆ ಆರ್ಯರು ಬಹುಪತ್ನಿಕರಾಗಿದ್ದರು. ವಿವಿಧ ಮೂಲಗಳು ತಿಳಿಸುವಂತೆ ನಮ್ಮ ರಾಜರ ರಾಣೀವಾಸಗಳು ಬಹುಪತ್ನಿಯರಿಂದ ತುಂಬಿರುತ್ತಿದ್ದವು. ಧರ್ಮಶಾಸ್ತ್ರಕಾರರು ಏಕಪತ್ನಿತ್ವವನ್ನು ಹೊಗಳಿದರೂ ಬಹುವಿವಾಹವನ್ನು ಪೂರ್ಣವಾಗಿ ನಿಷೇಧಿಸಲಿಲ್ಲ. ಕುಲೀನ ಬ್ರಾಹ್ಮಣರಲ್ಲಿ ಅದು ಶ್ರೇಷ್ಠತೆಯ ಕುರುಹಾಗಿತ್ತು. ಆಧುನಿಕ ಕಾಲದಲ್ಲಿ ಬಹುವಿವಾಹದ ವಿರುದ್ಧ ಚಳವಳಿಗಳಾಗಿವೆ; ಶಾಸನಗಳನ್ನು ಜಾರಿಗೆ ತರಲಾಗಿದೆ. ಇವುಗಳಲ್ಲಿ ಹಿಂದು ವಿವಾಹ ಅಧಿನಿಯಮದ (1955) 5 ಹಾಗೂ 13ನೆಯ ಪ್ರಕರಣಗಳು, ಭಾರತೀಯ ಕ್ರಿಶ್ಚನ್ ವಿವಾಹ ಅಧಿನಿಯಮದ (1872) 60ನೆಯ ಪ್ರಕರಣ, ಪಾರಸೀ ವಿವಾಹ ಹಾಗೂ ವಿವಾಹವಿಚ್ಛೇದನ ಅಧಿನಿಯಮದ (1936) 4ನೆಯ ಪ್ರಕರಣ, ವಿಶೇಷ ವಿವಾಹ ಅಧಿನಿಯಮದ (1954) 24ನೆಯ ಪ್ರಕರಣಗಳು ಬಹುವಿವಾಹವನ್ನು ನಿಷೇಧಿಸುತ್ತವೆ. ಮಹಮ್ಮದೀಯರ ವಿವಾಹಶಾಸನ ಬಹುಪತಿತ್ವವನ್ನು ಪೂರ್ಣವಾಗಿ ನಿಷೇಧಿಸುತ್ತದೆ. ಆದರೆ ನಾಲ್ಕು ಪತ್ನಿಯರನ್ನು ಹೊಂದುವ ನಿರ್ಬಂಧಿತ ಬಹುಪತ್ನಿತ್ವವನ್ನು ಮನ್ನಿಸಿದೆ. 

	ಭಾರತದಲ್ಲಿ 1955ರಲ್ಲಿ ವಿವಾಹ ಮಸೂದೆ ಜಾರಿಗೆ ಬರುವ ಮೊದಲು ಹಿಂದು ಸಮಾಜದಲ್ಲಿ ಬಹುಪತ್ನಿತ್ವಕ್ಕೆ ಅನುಮತಿ ಇತ್ತು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಮಕ್ಕಳಿಲ್ಲದಿದ್ದರೆ, ಎರಡನೆಯ ಹೆಂಡತಿಯನ್ನು ಹೊಂದುವ ಅವಕಾಶವಿರುತ್ತಿತ್ತು. ಬಂಗಾಲದಲ್ಲಿ ಉತ್ತಮ ಜಾತಿಯ ಹಿಂದುಗಳಲ್ಲಿ ಈ ಪದ್ಧತಿಯಿತ್ತು. ಒಬ್ಬ ಪುರುಷ ತನ್ನ ವರ್ಗದ ಹೆಣ್ಣನ್ನಾಗಲೀ ಅಥವಾ ತನ್ನ ವರ್ಗಕ್ಕಿಂತಲೂ ಕೆಳದರ್ಜೆಯ ಹೆಣ್ಣನ್ನಾಗಲೀ ವಿವಾಹವಾಗಬಹುದಾಗಿತ್ತು. ಆದರೆ ಒಬ್ಬ ಹೆಂಗಸು ತನ್ನ ವರ್ಗಕ್ಕೆ ಸೇರಿದ ಅಥವಾ ತನ್ನ ವರ್ಗಕ್ಕಿಂತಲೂ ಉತ್ತಮ ವರ್ಗಕ್ಕೆ ಸೇರಿದ ಪುರುಷನನ್ನು ಮದುವೆಯಾಗಬೇಕಾಗಿತ್ತು. ಹೆಂಗಸು ತನ್ನ ವರ್ಗಕ್ಕಿಂತಲೂ ಕೆಳದರ್ಜೆಯಲ್ಲಿರುವ ವರ್ಗದ ಗಂಡಸನ್ನು ಮದುವೆಯಾದರೆ, ಕುಟುಂಬದ ಘನತೆಗೆ ಕುಂದು ಎಂದು ಭಾವಿಸಲಾಗುತ್ತಿತ್ತು. ಬಂಗಾಲದಲ್ಲಿ ಉತ್ತಮ ಜಾತಿಯ ಪುರುಷರಲ್ಲಿ, ಅನೇಕರು ಕೆಳವರ್ಗಕ್ಕೆ ಸೇರಿದ ಸ್ತ್ರೀಯರನ್ನು ವಿವಾಹವಾಗುತ್ತಿದ್ದುದರಿಂದ, ಸಮಾಜದಲ್ಲಿ ಪುರುಷರ ಮತ್ತು ಸ್ತ್ರೀಯರ ಸಂಖ್ಯೆ ಸಮಾನವಾಗಿರದೆ ಸ್ತ್ರೀಯರು ಹೆಚ್ಚಾಗಿರುತ್ತಿದ್ದರು. ಆಗ ಒಬ್ಬ ಪುರುಷ ಅನೇಕ ಸ್ತ್ರೀಯರನ್ನು ವಿವಾಹವಾಗುವ ಅವಕಾಶ ಹೆಚ್ಚಾಗಿರುತ್ತಿತ್ತು. 19ನೆಯ ಶತಮಾನದಲ್ಲಿ ಬಂಗಾಳದಲ್ಲಿ ಈ ಬಗೆಯ ವಿವಾಹಗಳು ಕೊನೆಗೊಂಡವು. ಬಹುವಿವಾಹ ಪದ್ಧತಿ ಭಾರತದಲ್ಲಿ 1955ರಿಂದ ನಿಷೇಧಗೊಂಡಿದೆ. 

	ಬಹುವಿವಾಹ : ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಸ್ತ್ರೀಪುರುಷರ ವೈವಾಹಿಕ ಸಂಬಂಧವನ್ನು ಬಹುವಿವಾಹವೆಂದು ಕರೆಯಲಾಗುತ್ತದೆ. ಸ್ತ್ರೀ-ಪುರುಷರು ವಿವಾಹವಿಚ್ಛೇದನ, ಪರಿತ್ಯಾಗ ಅಥವಾ ಸಂಗಾತಿಯ ಮರಣಾನಂತರ ಪುನರ್ವಿವಾಹವಾದರೆ ಅದು ಬಹುವಿವಾಹವಲ್ಲ. ಏಕಕಾಲಕ್ಕೆ ಅನೇಕ ಸಂಗಾತಿಗಳನ್ನು ವಿವಾಹದ ಮೂಲಕ ಹೊಂದವುದು ಬಹುವಿವಾಹ. ಇದು ಮುಖ್ಯವಾಗಿ ಮೂರು ಪ್ರಕಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಬ್ಬ ಗಂಡಸು ಇಬ್ಬರು ಅಥವಾ ಹಲವು ಸ್ತ್ರಿಯರನ್ನು ವಿವಾಹವಾಗುವುದು ಬಹುಪತ್ನಿತ್ವ. ಒಂದು ಹೆಣ್ಣು ಇಬ್ಬರು ಅಥವಾ ಹಲವು ಪುರುಷರನ್ನು ವಿವಾಹವಾಗುವುದು ಬಹುಪತಿತ್ವ. ಕೆಲವು ಪುರುಷರು ಕೆಲವು ಸ್ತ್ರೀಯರೊಡನೆ ವಿವಾಹವಾಗುವುದು ಸಾಮೂಹಿಕ ವಿವಾಹ (ಗ್ರೂಪ್ ಮ್ಯಾರೇಜ್). ಸಾಮೂಹಿಕ ವಿವಾಹವೆಂದು ಈ ಹಿಂದೆ ವರದಿಮಾಡಲ್ಪಟ್ಟ ಉದಾಹರಣೆಗಳಲ್ಲಿ ಹೆಚ್ಚಿನವು ನಿಜವಾಗಿ ಬಹುಪತ್ನಿ-ಬಹುಪತಿತ್ವದ (ಪೊಲಿಜಿನ್ಯಾಂಡ್ರಿ) ಮಿಶ್ರ ಜಾತಿಯೆಂದು ಈಗ ಪರಿಗಣಿಸಲಾಗುತ್ತಿದೆ. ಹಿಮಾಲಯದ ಗುಡ್ಡಗಾಡು ಜನರಲ್ಲಿ ಸೋದರ ಬಹುಪತಿತ್ವವಿದ್ದು ಹಲವು ಜನ ಅಣ್ಣತಮ್ಮಂದಿರು ಕೂಡಿ ಒಬ್ಬಳನ್ನು ವಿವಾಹವಾಗುತ್ತಾರೆ. ಅನೇಕ ವರ್ಷಗಳ ಅನಂತರ ಅವರು ಇನ್ನೂ ಒಬ್ಬಳನ್ನು ಅಥವಾ ಇಬ್ಬರನ್ನು ಪತ್ನಿಯಾಗಿ ಪಡೆಯಬಹುದು. ಈ ಹಂತದಲ್ಲಿ ಅದು ಬಹುಪತ್ನಿತ್ವ ಅಥವಾ ಬಹುಪತಿತ್ವವೆನ್ನಿಸಬಹುದು. ಕೆಲವುವರ್ಷಗಳ ಅನಂತರದಲ್ಲಿ ಉಳಿದ ಸೋದರರೆಲ್ಲ ತೀರಿಹೋದಾಗ ಉಳಿದೊಬ್ಬ ತನ್ನ ಇಬ್ಬರು ಮೂವರು ಪತ್ನಿಯರೊಡನೆ ಇರುತ್ತಾನೆ. ಈ ಹಂತದಲ್ಲಿ ಅದು ಬಹುಪತ್ನಿತ್ವ ಎನ್ನಿಸುತ್ತದೆ. ಹೀಗೆ ಚಕ್ರಗತಿಯಿಂದ ಬಹುವಿವಾಹದ ರೂಪಗಳು ಬದಲಾಗಬಹುದು. ಬಹುವಿವಾಹಕ್ಕೆ ವಿವಿಧ ರೂಪಗಳಿವೆ, ವಿವಿಧ ಕಾರಣಗಳಿವೆ. ಬಹುವಿವಾಹದ ಸಂಗಾತಿಗಳ ಸ್ಥಾನಮಾನಗಳೂ ಹೊಣೆಗಾರಿಕೆಗಳೂ ವೈವಿಧ್ಯಮಯವಾಗಿವೆ. 

	ಬಹುವಿವಾಹ ಪದ್ಧತಿಗಳಲ್ಲಿ ಸಾಮೂಹಿಕ ವಿವಾಹ ಕುತೂಹಲಕರವಾದುದು. ಈಗ ಇರುವ ಯಾವ ಸಮಾಜದಲ್ಲಿಯೂ ಗುಂಪು ಅಥವಾ ಸಾಮೂಹಿಕ ವಿವಾಹ ಇತ್ತೆಂಬುದಕ್ಕೆ ಸಾಕ್ಷ್ಯ ದೊರಕುವುದಿಲ್ಲ. 19ನೆಯ ಶತಮಾನದ ವಿಕಾಸವಾದದ ಪ್ರವರ್ತಕರು ಸಾಮೂಹಿಕ ವಿವಾಹ ಒಂದು ಸಾಮಾಜಿಕ ಪಳೆಯುಳಿಕೆ ಎಂದು ನಂಬಿದ್ದರು. ಇವರ ಪ್ರಕಾರ ಆದಿಮಕಾಲದ ಮಾನವ ಸಮೂಹಗಳಲ್ಲಿ ಅನಿರ್ಬಂಧಿತ ಲೈಂಗಿಕತೆಯಿತ್ತು. ಅನಂತರ ಸಾಮೂಹಿಕ ವಿವಾಹ, ಬಹುಪತಿತ್ವ ಹಂತಗಳು ಕಾಣಿಸಿಕೊಂಡವು. ಪ್ರಸ್ತುತ ಏಕಪತ್ನಿತ್ವ ಸಾರ್ವತ್ರಿಕವಾಗುತ್ತಿದೆ. ಇವರ ಈ ವಾದಕ್ಕೆ ಪುಷ್ಟಿದೊರೆತಿಲ್ಲ. ಆಧುನಿಕ ಸಂಶೋಧನೆಗಳು ಸಾಮೂಹಿಕ ವಿವಾಹ ಅತಿ ವಿರಳವೆಂದೂ ಅದು ಬಹುಪತ್ನಿ, ಬಹುಪತಿ ವಿವಾಹದ ಒಂದು ರೂಪವೆಂದೂ ತೋರಿಸಿವೆ. ಬ್ರಜಿಲ್‍ನ ಕೈಂಗಾಂಗ್, ದಕ್ಷಿಣ ಶಾಂತಸಾಗರದ ಮಾಕ್ರ್ವಿಸ್, ಸೈಬೀರಿಯದ ಚುಕಚೀ ಜನರಲ್ಲಿ ಸಾಮೂಹಿಕ ವಿವಾಹ ರೂಢಿಯಲ್ಲಿರುವ ವರದಿಗಳಿವೆ. ಆದರೆ ಟಿಬೆಟ್‍ನ ಜನರಲ್ಲಿಯೂ ನೀಲಗಿರಿಯ ತೊದವರಲ್ಲಿಯೂ ಕಂಡುಬಂದ ಪ್ರಸಂಗಗಳು ಸಾಮೂಹಿಕ ವಿವಾಹವಲ್ಲವೆಂದು ಅಭಿಪ್ರಾಯಪಡಲಾಗಿದೆ. ಉದಾಹರಣೆಗೆ ತೊದವ ಸಹೋದರರು ತಮಗೆಲ್ಲರಿಗಾಗಿ ಒಬ್ಬಳು ಪತ್ನಿಯನ್ನಲ್ಲದೆ ಅವಳ ತಂಗಿಯರನ್ನೂ ತಂದುಕೊಳ್ಳುವುದುಂಟು. ಅದು ಬಹುಪತಿತ್ವ ಮತ್ತು ಬಹುಪತ್ನಿತ್ವಗಳ ಮಿಶ್ರಣವೇ ಹೊರತು ಸಾಮೂಹಿಕ ವಿವಾಹವಲ್ಲವೆಂಬ ಅಭಿಮತವಿದೆ. 

	ಸಮಾಜದ ವಿಶ್ವಾಸಗಳಿಸಿರುವ ಇತರ ವಿವಾಹ ಪದ್ಧತಿಗಳಲ್ಲಿ ನಿಯೋಗ ಮತ್ತು ಗತಿಸಿದ ಹೆಂಡತಿಯ ತಂಗಿಯೊಡನೆ ವಿವಾಹ ಮುಖ್ಯವಾದವು. ನಿಯೋಗವೆಂದರೆ ಒಬ್ಬ ವ್ಯಕ್ತಿ ಮರಣ ಹೊಂದಿದ ಬಳಿಕ ಆತನ ವಿಧವೆ ಪತ್ನಿಯನ್ನು ಆತನ ಸಹೋದರ ವಂಶಾಭಿವೃದ್ಧಿಗಾಗಿ ವಿವಾಹವಾಗುವುದು. ಅತ್ತಿಗೆಯನ್ನು ವಿವಾಹವಾಗುವುದರಿಂದ ಆತ ತನ್ನ ಅಣ್ಣನ ವಿಚಾರದಲ್ಲಿ ಆವಶ್ಯಕ ಕರ್ತವ್ಯವನ್ನು ನೆರವೇರಿಸುವುದಲ್ಲದೆ, ಅತ್ತಿಗೆಯ ಜೀವನ ಮಾರ್ಗಕ್ಕೆ ಸಹಾಯಕನಾಗುತ್ತಾನೆ. ಹಾಗೆಯೇ, ಒಬ್ಬ ತನ್ನ ಹೆಂಡತಿಯ ತಂಗಿಯನ್ನು ಮದುವೆಯಾಗುವುದರಿಂದ ಎರಡು ಕುಟುಂಬಗಳ ಪರಸ್ಪರ ಸಂಬಂಧ ಅಖಂಡವಾಗಿರಲು ಅನುಕೂಲವಾಗುವುದು. ಉತ್ತರ ಅಮೆರಿಕದ ಆದಿವಾಸಿಗಳಲ್ಲಿ ನಿಯೋಗ ಮತ್ತು ಗತಿಸಿದ ಹೆಂಡತಿಯ ತಂಗಿಯನ್ನು ಮದುವೆಯಾಗುವ ಪದ್ಧತಿಗಳು ರೂಢಿಯಲ್ಲಿವೆ. ಸೈಬೀರಿಯದ ಚುಕಚೀ ಜನರಲ್ಲಿ ಮತ್ತು ಪೂರ್ವ ಆಫ್ರಿಕದ ಮಸಾಯಿಗಳಲ್ಲಿ ನಿಯೋಗ ಪದ್ಧತಿ ಮಾತ್ರ ರೂಢಿಯಲ್ಲಿದೆ. 

	ಪತ್ನಿಯನ್ನುಗಳಿಸುವ ವಿಧಗಳು : ಲೋವಿ ಎಂಬ ವಿದ್ವಾಂಸ ಅನಕ್ಷರಸ್ಥ ಆದಿವಾಸಿಗಳಲ್ಲಿಕೊಳ್ಳುವುದು, ಅದಲುಬದಲು ಮಾಡುವುದು ಅಥವಾ ಕೊಟ್ಟು ತರುವುದು, ಸೇವೆ(ಊಳಿಗ), ಅನುನಯ, ಗಂಡಿನ ಶೌರ್ಯ ಪರೀಕ್ಷಿಸಿಕೊಡುವುದು ಬಹುಮುಖ್ಯವಾದ ವಿಧಗಳೆಂದು ತಿಳಿಸುತ್ತಾನೆ. ಸಾಮಾನ್ಯವಾಗಿ ಎಲ್ಲ ದೇಶದಲ್ಲೂ ಪತ್ನಿ ಗಳಿಕೆಯಲ್ಲಿ ಎಂಟು ವಿಧಗಳು ವಾಡಿಕೆಯಲ್ಲಿವೆ.

1. ಪರೀಕ್ಷಾರ್ಥಕ ವಿವಾಹ	2. ಸೆರೆ ವಿವಾಹ
3. ಶೌರ್ಯಪರೀಕ್ಷಾ ವಿವಾಹ	4. ತೆರ ವಿವಾಹ
5. ಊಳಿಗ ವಿವಾಹ		6. ವಿನಿಮಯ ವಿವಾಹ
7. ಪಲಾಯನ ವಿವಾಹ	8. ಹಠ ವಿವಾಹ 

	ಪರೀಕ್ಷಾರ್ಥಕ ವಿವಾಹದಲ್ಲಿ ಒಬ್ಬ ಯುವಕ ತಾನು ಮದುವೆಯಾಗಬೇಕೆಂದಿರುವ ಹುಡುಗಿಯ ಸಂಗಡ ಒಂದೇ ಮನೆಯಲ್ಲಿ ವಾಸಿಸುತ್ತಾನೆ. ಅವರಿಬ್ಬರೂ ಒಪ್ಪಿದರೆ ವಿವಾಹವಾಗುತ್ತದೆ. ಇಲ್ಲದಿದ್ದರೆ ಅವರು ಬೇರ್ಪಡುತ್ತಾರೆ. ಹಾಗೆ ಬೇರ್ಪಟ್ಟಾಗ ಯುವಕ ಹುಡುಗಿಯ ತಂದೆ ತಾಯಿಗಳಿಗೆ ಪರಿಹಾರವನ್ನು ಕೊಡುತ್ತಾನೆ. ಕೂಕಿ ಬುಡಕಟ್ಟು ಜನರಲ್ಲಿ ಈ ವಿವಾಹ ಪದ್ಧತಿ ರೂಢಿಯಲ್ಲಿದೆ.

	ಹೆಣ್ಣನ್ನು ಸೆರೆಹಿಡಿದು ಮದುವೆಯಾಗುವ ಪದ್ಧತಿಯೆ ಸೆರೆವಿವಾಹ. ಈ ಪದ್ಧತಿ ಇಂದು ಕೇವಲ ಸಂಪ್ರದಾಯಬದ್ಧವಾದ ಉತ್ಸವದಿಂದ ಕೂಡಿದ ಆಚರಣೆಯಾಗಿದೆ. ಅಸ್ಸಾಮಿನ ನಾಗಾಜನರು ಹಳ್ಳಿಗಳ ಮೇಲೆ ದಾಳಿ ನಡೆಸಿದಾಗ ಹುಡುಗಿಯನ್ನು ಸೆರೆಹಿಡಿದು ಮದುವೆಯಾಗುತ್ತಿದ್ದರು. ಮಧ್ಯಪ್ರಾಂತ ಪ್ರದೇಶಗಳಲ್ಲಿ, ಹೆಣ್ಣನ್ನು ಸೆರೆಹಿಡಿಯುವ ವಿಧಾನ ಶಾಂತಿಯುತವಾದುದಾಗಿತ್ತು. ಅಂತರ್ ಹಳ್ಳಿಯ ಜನರು ಬೇಟೆಗಾಗಿ ಅಥವಾ ಉತ್ಸವಕ್ಕಾಗಿ ಸೇರಿದಾಗ ಸ್ಪರ್ಧೆಗಳಿರುತ್ತವೆ. ಸುರಾಪಾನದಿಂದ ಮೈಮರೆತು ಆವೇಶಪರರಾಗಿರುವಾಗ ಹುಡುಗಿಯರನ್ನು ಸೆರೆಹಿಡಿಯುವ ಸಮಾರಂಭಗಳು ಜರಗುತ್ತವೆ. ಹೋಗಳು, ಬರ್ಹೋರರು, ಗೊಂಡರು ಸಾಂಪ್ರದಾಯಿಕವಾಗಿ ಸೆರೆಹಿಡಿಯುವ ಶಾಸ್ತ್ರವನ್ನು ಆಚರಿಸುತ್ತಾರೆ. 

	ಶೌರ್ಯ ಪರೀಕ್ಷಾರ್ಥಕ ವಿವಾಹದಲ್ಲಿ ಯುವಕರು ತಮ್ಮ ಶಕ್ತಿಸಾಮಥ್ರ್ಯಗಳನ್ನು ಪ್ರದರ್ಶಿಸುವ ಹಲವು ಕಾರ್ಯಗಳನ್ನಾಚರಿಸಿ ಯುವತಿಯರನ್ನು ವಿವಾಹವಾಗುತ್ತಾರೆ. 

	ತೆರ ವಿವಾಹದಲ್ಲಿ ಯುವಕ ಹೆಣ್ಣಿನ ತಂದೆ ತಾಯಿಗಳಿಗೆ ತೆರ ಕೊಟ್ಟು ವಿವಾಹವಾಗಬೇಕು. ಈ ಪದ್ಧತಿ ಸಮಾಜದಲ್ಲಿ ಹೆಣ್ಣಿನ ಕೀಳಾದ ಸ್ಥಾನ ನಿರ್ದೇಶಿಸುವುದೆಂಬ ಭಾವನೆ ಆಧಾರರಹಿತವಾದುದು. ಈ ಪದ್ಧತಿ ವಾಡಿಕೆಯಲ್ಲಿರುವ ಸಮಾಜಗಳಲ್ಲಿ ಹೆಣ್ಣಿಗೆ ಗಣ್ಯವಾದ ಸ್ಥಾನವಿದೆ. ಈ ವಿವಾಹವಿಧಾನ ಅನೇಕ ಸಮಾಜಗಳಲ್ಲಿ ಗೌರವಾರ್ಹವಾದುದೆಂದು ಪರಿಗಣಿತವಾಗಿದೆ. ತೆರದ ಮೌಲ್ಯ ಅಥವಾ ಮೊಬಲಗು ಕುಟುಂಬಗಳ ಸಾಮಾಜಿಕ ಸ್ಥಾನದ ಕುರುಹೆಂದು ಪರಿಗಣಿತವಾಗುತ್ತದೆ. ಹೆಣ್ಣು ಮದುವೆಯಾಗಿ ಮನೆಯಿಂದ ಹೊರಟರೆ ಹೆಣ್ಣಿನ ತಂದೆತಾಯಿಗಳು ನಷ್ಟವನ್ನು ಅನುಭವಿಸುತ್ತಾರೆ. ಹೀಗೆ ನಷ್ಟಕ್ಕೆ ಗುರಿಯಾದ ತಂದೆತಾಯಿಗಳಿಗೆ ತೆರವಾಗಿ ಕೊಟ್ಟಹಣ, ಪರಿಹಾರವೆಂದು ಭಾವಿಸಲಾಗುವುದು. ಅಸ್ಸಾಮಿನ ನಾಗ ಮತ್ತು ಇತರ ಬುಡಕಟ್ಟುಗಳಲ್ಲಿ, ಮಧ್ಯಭಾರತದ ಹಲವು ಬುಡಕಟ್ಟುಗಳಲ್ಲಿ ಈ ವಿವಾಹಪದ್ಧತಿ ರೂಢಿಯಲ್ಲಿದೆ. ತೆರಮೌಲ್ಯ ಬುಡಕಟ್ಟಿನಿಂದ ಬುಡಕಟ್ಟಿಗೆ ವ್ಯತ್ಯಾಸವಾಗುತ್ತದೆ. ಅಭೋರರಲ್ಲಿ ಗಂಡಿನ ಕುಟುಂಬದವರು ತಮ್ಮ ಶಕ್ತ್ಯಾನುಸಾರ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ ಹೆಣ್ಣಿನ ಕುಟುಂಬದವರಿಗೆ ಕಳುಹಿಸುವರು. ಹೀಗೆ ಕಳುಹಿಸಿದ ಆಹಾರವನ್ನೇ ತೆರ ಎಂದು ಭಾವಿಸಲಾಗುತ್ತದೆ.

	ಕೆಲವು ಆದಿವಾಸಿ ಸಮಾಜಗಳಲ್ಲಿ ವಿವಾಹಾಕಾಂಕ್ಷಿಗಳಾದ ಯುವಕರು ಹಣ ಕೊಡುವ ಸಾಮಥ್ರ್ಯವಿಲ್ಲದೆ ಹೆಣ್ಣಿನ ತಂದೆತಾಯಿಗಳ ಮನೆಯಲ್ಲಿ ಊಳಿಗಮಾಡಿ ವಿವಾಹವಾಗುವರು. ಇದು ಊಳಿಗ ವಿವಾಹ. ಈ ಪದ್ಧತಿಯಿರುವ ಕಡೆಗಳಲ್ಲಿ ಅಳಿಯನಾಗುವ ಯುವಕ ಸಾಮಾನ್ಯವಾಗಿ, ತನ್ನ ಭಾವೀ ಮಾವನ ಮನೆಯಲ್ಲಿರುವನು. ಗೊಂಡ, ಬೈಗ, ಬರ್ಹೋ ಮತ್ತು ಮುರಿಯರಲ್ಲಿ ಈ ವಿವಾಹಪದ್ಧತಿ ರೂಢಿಯಲ್ಲಿದೆ. 

	ಒಂದು ಕುಟುಂಬಕ್ಕೆ ಹೆಣ್ಣುಕೊಟ್ಟು ಅಲ್ಲಿಂದ ಹೆಣ್ಣು ತರುವ ಪದ್ಧತಿ ಅನೇಕ ಸಮಾಜಗಳಲ್ಲಿದೆ. ಇದೇ ವಿನಿಮಯ ವಿವಾಹ. ಅಭೋರರಲ್ಲಿ ಸಹೋದರ ಸಹೋದರಿಯರನ್ನು ಕೊಟ್ಟು ತರುವ ಪದ್ಧತಿ ಹೆಚ್ಚು ರೂಢಿಯಲ್ಲಿದೆ. ಈ ವಿವಾಹದ ಜೊತೆಗೆ ಅವರು ಬೇರೆ ವಿಧದ ವಿವಾಹಗಳನ್ನೂ ಆಚರಿಸುತ್ತಾರೆ. ಹೆಣ್ಣುಕೊಟ್ಟು ಹೆಣ್ಣು ತರುವ ಪದ್ಧತಿ ಆಸ್ಟ್ರೇಲಿಯ, ಮಲೇಷ್ಯ ಪ್ರದೇಶಗಳಲ್ಲಿಯೂ ರೂಢಿಯಲ್ಲಿದೆ. 

	ಪರಸ್ಪರ ಒಪ್ಪಿ ಮದುವೆಯಾಗುವ ಪದ್ಧತಿ ಅನೇಕ ಆದಿವಾಸಿ ಸಮಾಜಗಳಲ್ಲಿದೆ. ಇಂಥ ಸಮಾಜಗಳಲ್ಲಿ ಎಲ್ಲಿ ಯುವಜನರ ನಿದ್ರಾಶಾಲೆಗಳಿರುವುವೊ ಅಲ್ಲಿ ಒಪ್ಪಿಗೆಯ ವಿವಾಹಗಳಿರುವುವು. ಯುವಕ ಯುವತಿಯರು ನಿದ್ರಾಶಾಲೆಗಳಲ್ಲಿ ವಿವಾಹಗಳನ್ನು ನಿಶ್ಚಯಿಸಿದ ಮೇಲೆ, ತಮ್ಮ ತಂದೆ ತಾಯಿಗಳ ಒಪ್ಪಿಗೆಯನ್ನು ಪಡೆಯುತ್ತಾರೆ. ಅಭೋರರಲ್ಲಿ ಯುವಕ ಯುವತಿಯರಿಗೆ ಪ್ರತ್ಯೇಕ ನಿದ್ರಾಶಾಲೆಗಳಿರುತ್ತವೆ. ಅಭೋರ ಯುವಕರ ನಿದ್ರಾಶಾಲೆ ವಿಶಾಲವಾಗಿರುತ್ತದೆ. ಅಲ್ಲಿ ಬುಡಕಟ್ಟಿನ ಎಲ್ಲ ಬಣಗಳ ಯುವಕರಿಗೆ ಪ್ರತ್ಯೇಕವಾಗಿ ಪಾಕಶಾಲೆಗಳಿರುತ್ತವೆ. ಪ್ರತಿಯೊಂದು ಬಣದ ಹುಡುಗಿಯರಿಗೂ ಪ್ರತ್ಯೇಕವಾದ ನಿದ್ರಾಶಾಲೆಯಿದೆ. ಅದನ್ನು ರಹಸಿಂಗ್ ಎಂದು ಕರೆಯುತ್ತಾರೆ. ಹುಡುಗರು ತಂದೆತಾಯಿಗಳ ಸಂಗಡ ನಿದ್ರಿಸುವ ವಯಸ್ಸು ಮೀರಿದ ಕೂಡಲೇ ನಿದ್ರಾಶಾಲೆಗಳಿಗೆ ಹೋಗುತ್ತಾರೆ. ಒಂದೇ ಬಣದ ಹುಡುಗ ಹುಡುಗಿಯರಿಗೆ ಪರಸ್ಪರ ವಿವಾಹವಿಲ್ಲ. ಆದುದರಿಂದ ಯುವಕರು ಬೇರೆ ಬಣದ ರಹಸಿಂಗ್‍ಗೆ ಹೋಗಿ ಅಲ್ಲಿಯ ಹುಡುಗಿಯರ ಸ್ನೇಹವನ್ನು ಗಳಿಸುತ್ತಾರೆ. ಒಬ್ಬ ಹುಡುಗಿ ರಹಸಿಂಗ್‍ನಲ್ಲಿರುವಾಗ ಅನೇಕ ಯುವಕರ ಸಂಗಡ ಸ್ನೇಹದಿಂದಿರಬಹುದು. ಕೊನೆಗೆ ಯಾರನ್ನು ಬಯಸುವಳೋ ಆತನನ್ನು ಮದುವೆಯಾಗಬಹುದು. ಆಕೆ ಗರ್ಭಿಣಿಯಾದರೆ, ಗರ್ಭಧರಿಸಲು ಕಾರಣನಾದ ಪುರುಷನನ್ನು ಮದುವೆಯಾಗುವಳು. ಗರ್ಭಿಣಿಯಾದ ಮೇಲೆ ಹುಡುಗಿ ತನ್ನ ತಂದೆತಾಯಿಗಳ ಮನೆಗೆ ಹೋಗುವಳು. ಒಬ್ಬ ಹುಡುಗಿ ರಹಸಿಂಗ್‍ನಲ್ಲಿದ್ದಾಗ ಗರ್ಭವತಿಯಾದರೆ ಶಿಶು ಜನಿಸಿದ ಮೇಲೆ, ಆ ಶಿಶುವಿನ ತಂದೆಯನ್ನು ಮದುವೆಯಾಗುವಳು. ಆದರೆ ಆ ಮದುವೆಗೆ ಹೆಣ್ಣಿನ ತಂದೆ ತಾಯಿಗಳ ಅನುಮತಿಯನ್ನು ಯುವಕ ಪಡೆಯಬೇಕು. ಕೆಳಮಟ್ಟದ ಗುಡ್ಡಪ್ರದೇಶಗಳಲ್ಲಿ ವಾಸಿಸುವ ಅಭೋರರಲ್ಲಿ ಹುಡುಗಿಯರ ನಿದ್ರಾಶಾಲೆಗಳಿಲ್ಲ. ಯುವಕರು ಯುವತಿಯರಿಗೆ ಅವರ ಮನೆಗಳಲ್ಲಿ ಅನುನಯವನ್ನು ತೋರಿಸಿ ಅವರ ಮೆಚ್ಚುಗೆ ಪಡೆದು ವಿವಾಹವಾಗುವರು. ಮುರಿಯ ಜನರಲ್ಲಿ ನಿದ್ರಾಶಾಲೆಗಳನ್ನು ಘೋಟುಲ್ ಎಂದು ಕರೆಯುತ್ತಾರೆ. ಆದರೆ ಘೋಟುಲ್ ಮದುವೆಗಳು ಈಗ ವಿರಳವಾಗಿವೆ. ವೆರಿಯರ್ ಎಲ್ವಿನ್ ಎಂಬ ವಿದ್ವಾಂಸ ತಿಳಿಸಿರುವಂತೆ ಮುರಿಯರಲ್ಲಿ ಹಿರಿಯರು ವಿವಾಹವನ್ನು ನಿಶ್ಚಯಿಸುವ ವಾಡಿಕೆ ಹೆಚ್ಚಾಗಿದೆ. ಆದರೆ ಘೋಟುಲ್ ಪದ್ಧತಿಯ ಲೈಂಗಿಕ ಸಂಬಂಧಗಳು ವಿವಾಹಪೂರ್ವದಲ್ಲಿ ಜರುಗುವುದರಿಂದ, ಕೆಲವು ಬಾರಿ ತಂದೆತಾಯಿಗಳ ಅಭಿಪ್ರಾಯಕ್ಕೆ ವಿರೋಧವಾಗಿ ಮದುವೆಗಳಾಗುವ ಸನ್ನಿವೇಶಗಳುಂಟು. ಹಲವು ವೇಳೆ ಯುವಕ ತಾನು ಘೋಟುಲ್‍ನಲ್ಲಿ ಒಪ್ಪಿದ ಹುಡುಗಿಯ ಸಂಗಡ ಓಡಿಹೋಗಿ, ಹಿರಿಯರು ನಿಶ್ಚಯಿಸಿದ ವಿವಾಹವನ್ನು ತಿರಸ್ಕರಿಸಿ ಅವರ ಆಗ್ರಹಕ್ಕೆ ಪಾತ್ರನಾಗುವುದೂ ಉಂಟು.

	ಕೊನೆಯದಾಗಿ ಯುವಕರು ಒಪ್ಪದೇ ಇದ್ದರೂ ಯುವತಿಯರು ತಾವಾಗಿ ಮುನ್ನುಗ್ಗಿ ಮದುವೆಯಾಗಲು ನಿರ್ಬಂಧಮಾಡುವ ಪದ್ಧತಿ ಅತಿವಿರಳವಾಗಿ ರೂಢಿಯಲ್ಲಿದೆ. ಇದೇ ಹಠವಿವಾಹ. ಬರ್ಹೋರರಲ್ಲಿಯೂ ಹೋ ಜನರಲ್ಲಿಯೂ ಈ ಪದ್ಧತಿ ರೂಢಿಯಲ್ಲಿದೆ. ಹೋ ಜನರ ಈ ವಿಧದ ಮದುವೆಯನ್ನು ಅನ್‍ಡೀರ್ ಎಂದು ಕರೆಯುತ್ತಾರೆ. ಈ ವಿಧವಾದ ಮದುವೆಗೆ ಸಮಾಜದಲ್ಲಿ ಹೆಚ್ಚಿನ ಗೌರವವಿಲ್ಲ. 

	ಒಂದು ಸಮಾಜ ಈ ವಿವಾಹ ವಿಧಗಳಲ್ಲಿ ಒಂದೊಂದನ್ನೇ ಆಚರಿಸಬಹುದು ಅಥವಾ ಹಲವನ್ನು ಒಟ್ಟಿಗೆ ಆಚರಿಸಬಹುದು. ಮುರ್ಡಕ್ ಎಂಬ ವಿದ್ವಾಂಸ ಪರಿಶೀಲಿಸಿದ 250 ಸಮಾಜಗಳ ಪೈಕಿ, ಕೇವಲ 115 ಸಮಾಜಗಳಲ್ಲಿ ವಿವಾಹಪೂರ್ವ ಮತ್ತು ವಿವಾಹ ಬಾಹ್ಯ ಲೈಂಗಿಕ ಸಂಬಂಧಗಳ ವಿಚಾರದಲ್ಲಿ ಸಾಕಷ್ಟು ವಿಷಯಗಳು ದೊರೆತವು. ಕೇವಲ 3 ಸಮಾಜಗಳಲ್ಲಿ ಮಾತ್ರ ಲೈಂಗಿಕ ಸಂಬಂಧಗಳ ಮೇಲೆ ಸಾಮಾನ್ಯ ನಿಷೇಧಗಳಿದ್ದವು. 49 ಸಮಾಜಗಳಲ್ಲಿ ವಿವಾಹಪೂರ್ವ ಸಂಬಂಧಗಳಿಗೆ ಅವಕಾಶವಿತ್ತು. ಕೇವಲ ಮೂರು ಸಮಾಜಗಳು ವ್ಯಭಿಚಾರಕ್ಕೆ ಮಾನ್ಯತೆಯನ್ನು ಕೊಟ್ಟಿದ್ದವು. 23 ಸಮಾಜಗಳಲ್ಲಿ ವಿಶೇಷ ಸೌಕರ್ಯ ಸಂಬಂಧಗಳಿದ್ದವು. ಉತ್ತರ ಅಮೆರಿಕದ ಇಂಡಿಯನ್ ಬುಡಕಟ್ಟು ಜನರಲ್ಲಿ ವಿವಾಹಪೂರ್ವ ಸಂಬಂಧ ಹೆಚ್ಚು ವಾಡಿಕೆಯಲ್ಲಿದೆ. ಆದರೆ ವಿವಾಹಬಾಹಿರ ವರ್ಗದ ಬಂಧುಗಳೊಡನೆ ಲೈಂಗಿಕ ಸಂಬಂಧ ಶಿಕ್ಷಾರ್ಹವಾಗುತ್ತದೆ. 

	ಅನೇಕ ಸಮುದಾಯಗಳಲ್ಲಿ ವಿವಾಹಪೂರ್ವ ಲೈಂಗಿಕ ಸಂಬಂಧಗಳ ಮೇಲೆ ನಿಷೇಧವಿದೆ. ಕೇರಳದ ಕನಿಕ್ಕರಲ್ಲಿ ವಿವಾಹವಾಗುವ ಹುಡುಗಿ ಪರಿಶುದ್ಧ ಕನ್ಯೆಯಾಗಿರಬೇಕೆಂಬ ನಿಯಮವಿದೆ. ಈ ನಿಯಮವನ್ನು ಪಾಲಿಸದ ಹುಡುಗಿಯನ್ನು ಸಮಾಜ ಶಿಕ್ಷಿಸುತ್ತದೆ. ವಿವಾಹಪೂರ್ವ ಸಂಬಂಧವನ್ನು ಹೊಂದಿರುವ ಯುವಕ ಯುವತಿಯರನ್ನು ವಿಚಾರಣೆ ಮಾಡಿ, ಅವರಿಗೆ ಪ್ರತ್ಯೇಕವಾಗಿ ದಂಡವನ್ನು ವಿಧಿಸಿ ಅವರು ವಿವಾಹವಾಗುವಂತೆ ಬುಡಕಟ್ಟಿನ ಸಭೆ ನಿರ್ದೇಶಿಸುತ್ತದೆ. ಆದರೆ ಅಪರಾಧ ಮಾಡಿದವರು ವಿವಾಹಬಾಹ್ಯ ಗುಂಪಿಗೆ ಸೇರಿದ್ದರೆ, ಸಭೆ ಅವರನ್ನು ದಂಡಹಾಕಿ ಶಿಕ್ಷಿಸುವುದಲ್ಲದೆ, ಬುಡಕಟ್ಟಿನ ಯಜಮಾನ ನಿಷ್ಕರ್ಷಿಸುವ ವ್ಯಕ್ತಿಯನ್ನೇ ಮದುವೆಯಾಗಬೇಕೆಂದು ಆಜ್ಞೆ ಮಾಡುತ್ತದೆ. ಬುಡಕಟ್ಟಿನ ಯಜಮಾನ ಗೊತ್ತುಮಾಡುವ ವಿವಾಹ ಸಂಬಂಧಕ್ಕೆ ಯಾರೂ ಪ್ರತಿ ಹೇಳುವಂತಿಲ್ಲ. ವಿವಾಹಕ್ಕೆ ಮೊದಲು ಹುಡುಗಿ ಗರ್ಭವತಿಯಾದರೆ, ಆಕೆಯನ್ನು ಕೆಲವು ಸಮಾಜಗಳು ಶಿಕ್ಷಿಸುತ್ತವೆ. ಕೆಲವು ಸಮಾಜಗಳಲ್ಲಿ ಆಕೆಯ ಮೇಲೆ ಯಾವ ಕಳಂಕವೂ ಇರುವುದಿಲ್ಲ. ಅಭೋರರು ಅಂಥ ಯುವತಿಯನ್ನು ಕಳಂಕರಹಿತಳೆಂದು ಭಾವಿಸುವರು. ಆದರೆ ಆಕೆಯಲ್ಲಿ ಜನಿಸುವ ಮಗುವಿನ ಸ್ಥಾನದಲ್ಲಿ ಕೆಲವು ಬದಲಾವಣೆಗಳಾಗುವ ಸಂಭವಗಳಿವೆ. ಆಕೆ ರಹಸಿಂಗ್‍ನಲ್ಲಿ ಗರ್ಭವತಿಯಾದರೆ, ಮಗು ಹುಟ್ಟಿದ ಮೇಲೆ ಆ ಮಗುವಿನ ತಂದೆಯ ಸಂಗಡ ವಿವಾಹವಾಗಬಹುದು. ಆದರೆ ಕೆಲವು ಸಲ ಆಕೆ ಬೇರೊಬ್ಬನನ್ನು ಮೋಹಿಸಿ ಮದುವೆಯಾಗಬಹುದು. ರಹಸಿಂಗ್ ಸಂಬಂಧದಲ್ಲಿ ಜನಿಸಿದ ಶಿಶು ಗಂಡಾಗಿದ್ದರೆ, ಅದರ ತಂದೆ ಯಾರೆಂದು ತಿಳಿದಿದ್ದರೆ, ಆಗ ಅದು ತಂದೆಯ ಬಣಕ್ಕೆ ಸೇರುತ್ತದೆ. ಆದರೆ ಅದು ಹೆಣ್ಣುಮಗುವಾದರೆ, ಆಕೆ ವಿವಾಹವಾಗುವ ಪುರುಷನ ಬಣಕ್ಕೆ ಸೇರುತ್ತದೆ. ಮುರಿಯರಲ್ಲಿ ವಿವಾಹಪೂರ್ವ ಲೈಂಗಿಕ ಸಂಬಂಧಗಳ ಮೇಲೆ ಯಾವ ನಿರ್ಬಂಧಗಳೂ ಇಲ್ಲ. ಆದರೆ ವಿವಾಹಕ್ಕೆ ಮೊದಲು ಹೆಣ್ಣು ಗರ್ಭವತಿಯಾದರೆ ಅವಮಾನಕರವೆಂದು ಪರಿಗಣಿಸುವರು. ವಿವಾಹಕ್ಕೆ ಮುನ್ನ ಶಿಶು ಜನನವಾದರೆ ಆಕೆ ತನ್ನ ಪ್ರಿಯತಮನ ಸಂಗಡ ಓಡಿಹೋಗಬಹುದು. ಹಾಗಲ್ಲದೆ ನಿಶ್ಚಿತವಾದ ಯುವಕ ವಿವಾಹವಾಗಲು ಇಚ್ಛಿಸಿದರೆ ಆತ ಮದುವೆಯಾಗಬಹುದು. ಆಗ ಆಕೆ ಗರ್ಭಧರಿಸಲು ಕಾರಣನಾದ ಯುವಕ ಗ್ರಾಮಪಂಚಾಯತಿಗೆ ದಂಡವನ್ನೂ ಆ ಹುಡುಗಿಯ ನಿಶ್ಚಿತ ಯುವಕನಿಗೆ ಪರಿಹಾರವನ್ನೂ ಕೊಡಬೇಕು. ವೆರಿಯರ್ ಎಲ್ವಿನ್ ಎಂಬ ವಿದ್ವಾಂಸ ಅಧ್ಯಯನ ಮಾಡಿದ 80 ವಿವಾಹಪೂರ್ವ ಗರ್ಭಧಾರಣೆಗಳಲ್ಲಿ ಕೇವಲ 26 ಹುಡುಗಿಯರು ತಮ್ಮ ನಲ್ಲರೊಂದಿಗೆ ಮದುವೆಯಾದರು. ಉಳಿದ 54 ಹುಡುಗಿಯರು ಹಿಂದೆ ನಿಶ್ಚಯಿಸಲ್ಪಟ್ಟಿದ್ದ ಯುವಕರನ್ನು ಮದುವೆಯಾದರು. ವಿವಾಹಿತ ಸ್ತ್ರೀಯರು ಪರಪುರುಷರೊಡನೆ ಲೈಂಗಿಕ ಸಂಬಂಧ ಹೊಂದಿರುವುದನ್ನು ಹೆಚ್ಚು ಸಮಾಜಗಳು ನಿಷೇಧಿಸಿವೆ. ಮುರ್ಡಕ್‍ನ ಪ್ರಕಾರ ಈ ನಡವಳಿಕೆಯನ್ನು ಕೇವಲ ಮೂರು ಸಮಾಜಗಳು ಮಾತ್ರ ಮಾನ್ಯಮಾಡಿವೆ ಎಂದು ತಿಳಿದುಬರುತ್ತದೆ. 

	ಆಧುನಿಕ ಸಂಕೀರ್ಣ ಸಮಾಜಗಳಲ್ಲಿ ಮುಖ್ಯವಾದ ಕ್ರೈಸ್ತ, ಮುಸ್ಲಿಮ್ ಮತ್ತು ಹಿಂದು ವಿವಾಹ ಪದ್ಧತಿಗಳು ಭಿನ್ನವಾಗಿವೆ.

	ಕ್ರೈಸ್ತವಿವಾಹ : ಆದಿಕ್ರೈಸ್ತಧರ್ಮದ ವಿವಾಹದ ಆದರ್ಶಗಳಿಗೂ ಈಗಿನ ಕ್ರೈಸ್ತ ಸಮಾಜದ ವಿವಾಹದ ಆದರ್ಶಗಳಿಗೂ ವ್ಯತ್ಯಾಸಗಳಿವೆ. ಕ್ರೈಸ್ತ ಪಂಗಡಗಳ ವ್ಯತ್ಯಾಸಗಳು ವಿವಾಹಾದರ್ಶಗಳಲ್ಲಿರುವ ವ್ಯತ್ಯಾಸಗಳನ್ನು ಸೂಚಿಸುತ್ತವೆ. ಮಕ್ಕಳನ್ನು ಪಡೆಯುವುದು ವೈವಾಹಿಕ ಪ್ರೀತಿಯ ಪವಿತ್ರತೆ ದಂಪತಿಗಳಿಗೂ ದೇವರಿಗೂ ಇರುವ ಸಂಬಂಧವನ್ನು ಸ್ಥಾಪಿಸುವುದು ಇವು ಕ್ರೈಸ್ತಧರ್ಮ ಹೇಳುವ ವಿವಾಹದ ಮೂರು ಕ್ರಿಯೆಗಳು. ಇದು ಮನುಷ್ಯನನ್ನು ಮೂರು ದೃಷ್ಟಿಗಳಿಂದ ವೀಕ್ಷಿಸಿದೆ. ಮೊದಲನೆಯದಾಗಿ ಮನುಷ್ಯ ಉಳಿದ ಪ್ರಾಣಿಗಳಂತೆಯೇ ಒಂದು ಪ್ರಾಣಿ. ಎರಡನೆಯದಾಗಿ ಮನುಷ್ಯ ಸಮಾಜಜೀವಿ. ಮೂರನೆಯದಾಗಿ ಮನುಷ್ಯ ಆಧ್ಯಾತ್ಮಿಕ ಜೀವಿ. ವಿವಾಹದ ಮೂರು ಕ್ರಿಯೆಗಳು ಮನುಷ್ಯನ ಈ ಮೂರು ಮುಖಗಳಿಗೆ ಸಂಬಂಧಿಸಿವೆ. ವಿವಾಹ ಕ್ರಿಯೆಗಳಲ್ಲಿ ಪರಸ್ಪರ ಪ್ರತ್ಯೇಕತೆಯಿಲ್ಲ. ದೇವರು ವಿವಾಹಕ್ಕೆ ಸಾಕ್ಷೀಭೂತನಾಗಿರುವುದರಿಂದ ವಿವಾಹದ ಮೂರು ಕ್ರಿಯೆಗಳಿಗೆ ಪರಸ್ಪರ ವಿಶೇಷ ಸಂಬಂಧವಿದೆ. ಜನಿಸಿದ ಶಿಶುವಿನಲ್ಲಿ ಶರೀರ ಮತ್ತು ಆತ್ಮಗಳ ಸಂಯೋಗವಿರುವುದರಿಂದ ಈ ಧರ್ಮ ಲೈಂಗಿಕ ಕ್ರಿಯೆಯನ್ನು ಗೂಢವಾದ ರಹಸ್ಯದಿಂದಾವೃತವಾದ ವಿಷಯವೆಂದು ಭಾವಿಸಿದೆ. ದಾಂಪತ್ಯ ಪ್ರೇಮದ ಒಂದು ಗುಣಭಾಗ, ದೈಹಿಕ ಪ್ರೀತಿಯಿಂದ ಬೇರೆಯಾಗಿ ದೈವೀಪ್ರೇಮವಾಗುವುದು. ಈ ಧರ್ಮದ ಪ್ರಕಾರ ದೇವರು ಸಮಾಜ ಸುಭದ್ರತೆಗೆ ತಳಹದಿಯಾಗಲೆಂಬ ಉದ್ದೇಶದಿಂದ ಸ್ತ್ರೀಪುರುಷರ ಹೃದಯಗಳಲ್ಲಿ ಪರಸ್ಪರ ಪ್ರೀತಿಯನ್ನು ಮೂಡಿಸಿದ. ಕಾಮವನ್ನು ಅಂಕೆಯಲ್ಲಿಡಬೇಕಾದ ಆವಶ್ಯಕತೆಯನ್ನು ಈ ಧರ್ಮ ಒತ್ತಿ ಹೇಳುತ್ತದೆ. ಹೊಸ ಕುಟುಂಬಗಳ ಸ್ಥಾಪನೆಗೋಸ್ಕರ ವಿವಾಹಕ್ಕೆ ಮಾನ್ಯತೆ ಕೊಟ್ಟಿದ್ದರೂ ಈ ಧರ್ಮ ಅವಿವಾಹಿತ ವ್ಯಕ್ತಿಗಳ ಪವಿತ್ರ ಜೀವನಕ್ಕೆ ಉನ್ನತ ಸ್ಥಾನವನ್ನು ನೀಡಿದೆ. ಕ್ಯಾಥೊಲಿಕರು ಕ್ರೈಸ್ತ ಸಂನ್ಯಾಸಿ ಮತ್ತು ಸಂನ್ಯಾಸಿನಿಯರ ಪರಿಶುದ್ಧತೆಗೆ ಹೆಚ್ಚಿನ ಪ್ರಾಮುಖ್ಯ ಕೊಟ್ಟಿದ್ದಾರೆ. ಪ್ರಪಂಚದಲ್ಲಿ ಅನೇಕ ಸಮಾಜಗಳು ದಾಂಪತ್ಯಜೀವನದ ಅಗತ್ಯವನ್ನು ಮನಗಂಡು ಪ್ರತಿಯೊಬ್ಬ ಸ್ತ್ರೀಪುರುಷರೂ ವಿವಾಹವಾಗಬೇಕೆಂಬ ಆದೇಶವನ್ನು ನೀಡಿವೆ. ಆದರೆ ಕ್ರೈಸ್ತಧರ್ಮದಲ್ಲಿ ಒಬ್ಬ ವ್ಯಕ್ತಿ ವಿವಾಹವಾಗಲೇಬೇಕೆಂಬ ನಿಯಮವಿಲ್ಲ. ಏಕಪತ್ನೀವಿವಾಹ ಕ್ರೈಸ್ತವಿವಾಹದ ಮತ್ತೊಂದು ಮುಖ್ಯ ಲಕ್ಷಣ. ಕ್ರೈಸ್ತರ ಹಳೆಯ ಒಡಂಬಡಿಕೆಯಲ್ಲಿ ಬಹುಪತ್ನಿತ್ವ ವಿವಾಹ ಸಂದರ್ಭಗಳನ್ನು ತಿಳಿಸಿದ್ದರೂ ಈ ಧರ್ಮ ಬಹುಪತ್ನಿತ್ವವನ್ನು ಪಾಪವೆಂದು ಪರಿಗಣಿಸಿದೆ. ಒಬ್ಬ ಪುರುಷ ಒಂದು ಬಾರಿಗೆ ಒಬ್ಬ ಹೆಂಡತಿಯನ್ನು ಹೊಂದಿರಬೇಕೆಂಬ ನಿಯಮವಿದೆ. ಆದರೆ ವಿಧವೆಯರ ವಿವಾಹದ ಮೇಲಾಗಲೀ ವಿಧುರರ ವಿವಾಹದ ಮೇಲಾಗಲೀ ಯಾವುದೇ ನಿರ್ಬಂಧಗಳಿಲ್ಲ. ಆದಿಕ್ರೈಸ್ತಧರ್ಮ ವಿವಾಹವನ್ನು ಧಾರ್ಮಿಕ ಸಂಸ್ಕಾರವೆಂದು ಪರಿಗಣಿಸಿದುದರಿಂದ, ವಿವಾಹ ವಿಚ್ಛೇದನವನ್ನು ನಿಷೇಧಿಸಿತು. ಈ ನಿಯಮವನ್ನು ರೋಮನ್ ಕ್ಯಾಥೊಲಿಕರು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಉಳಿದ ಕ್ರೈಸ್ತಪಂಥಗಳಲ್ಲಿ ವಿವಾಹ ವಿಚ್ಛೇದನಗಳ ಮೇಲೆ ನಿರ್ಬಂಧವಿಲ್ಲ. 

	ಮುಸ್ಲಿಮ್ ವಿವಾಹ : ಇಸ್ಲಾಮ್ ಧರ್ಮದಲ್ಲಿ ಮದುವೆ ಮೂಲತಃ ಸಮಾಜ ವ್ಯವಹಾರದ ಒಂದು ಒಪ್ಪಂದ ಮಾತ್ರ. ಪ್ರವಾದಿ ಮಹಮದ್ ಪೈಗಂಬರ್ ಬ್ರಹ್ಮಚರ್ಯೆಯನ್ನು ಒಪ್ಪದೆ ಮದುವೆಗೆ ಪ್ರೋತ್ಸಾಹ ಕೊಟ್ಟ. ಮದುವೆ ಮಾಡಿಕೊಂಡ ಸಂಸಾರಿ ಧರ್ಮವನ್ನು ಅರ್ಧದಷ್ಟು ಸಾಧಿಸಿದಂತೆ ಎಂದು ಆತ ಹೇಳಿದ. ಇವರಲ್ಲಿ ಬಹುಪತ್ನಿತ್ವ ವಾಡಿಕೆಯಲ್ಲಿದೆ. ಕುರಾನಿನ ಪ್ರಕಾರ ಒಬ್ಬ ಮುಸ್ಲಿಮನಿಗೆ ನಾಲ್ಕುಮಂದಿ ಪತ್ನಿಯರಿರಬಹುದು. ಮುಸ್ಲಿಮ್ ಸಮಾಜ ಕನ್ಯೆಯ ವಿವಾಹಪೂರ್ವ ಪಾವಿತ್ರ್ಯವನ್ನು ಆವಶ್ಯಕವೆಂದು ಭಾವಿಸುತ್ತದೆ. ಮದುವೆಯಾದಮೇಲೆ ಆಕೆ ಸಂಪೂರ್ಣ ಪತಿನಿಷ್ಠಳಾಗಿರಬೇಕು. ಇವರಲ್ಲಿ ಹೆಂಗಸರು ಮುಖಕ್ಕೆ ಕಪ್ಪುಬಣ್ಣದ ಪರದಾ ಅಥವಾ ಬುರ್ಖಾ ಧರಿಸುವ ಪದ್ಧತಿ ರೂಢಿಯಲ್ಲಿದೆ. ಪರಪುರುಷರನ್ನು ಕಣ್ಣೆತ್ತಿಯೂ ನೋಡಕೂಡದು, ನೋಡುವುದು ಪಾಪ ಎಂಬ ನಂಬಿಕೆಯಿದೆ. ಯಾವ ಯಾವ ನಂಟರಲ್ಲಿ ಸಂಬಂಧ ಬೆಳೆಸಬಹುದು ಹಾಗೂ ಬೆಳೆಸಬಾರದು ಎಂಬ ವಿಚಾರದಲ್ಲಿ ಕುರಾನಿನಲ್ಲಿ ವಿಶದವಾದ ನಿರೂಪಣೆಯಿದೆ. ಇವರಲ್ಲಿ ವ್ಯಕ್ತಿ ತನ್ನ ಚಿಕ್ಕಪ್ಪ, ದೊಡ್ಡಪ್ಪರ ಮಕ್ಕಳನ್ನು ಮದುವೆಯಾಗುವ ಸಂಪ್ರದಾಯವಿದೆ. ಇರಾನಿನಲ್ಲಿ ಸಾಮಾನ್ಯವಾಗಿ ಗಂಡಹೆಂಡಿರು ಒಂದೇ ಮನೆತನದವರಾಗಿರುತ್ತಾರೆ. ವಿಧವೆಯರ, ವಿಚ್ಛೇದಿತ ಹೊಂದಿದ ಸ್ತ್ರೀಯರ ಮದುವೆ ಹಿಂದೆ ರೂಢಿಯಲ್ಲಿತ್ತು. ಈ ಧರ್ಮದ ಪ್ರಕಾರ ಮದುವೆಯಲ್ಲಿ ಪ್ರಧಾನ ಕರ್ಮ ನಿಕಾ. ಇದು ಅರಬ್ಬಿ ಶಬ್ದ. ಇದರ ಅರ್ಥ ಸಂಯೋಗ ಎಂದು. ಆದರೆ ಸಾಮಾನ್ಯವಾಗಿ ಕರಾರು ಅಥವಾ ಒಪ್ಪಂದ ಎಂಬ ಭಾವದಲ್ಲಿ ಈಗ ಈ ಪದ ಉಪಯೋಗವಾಗುತ್ತಿದೆ. ನಿಕಾ ವಿಧಿ ಬಹಳ ಸರಳವಾದದ್ದು. ಇದಕ್ಕೆ ಬೇಕಾದುದು ಗಂಡುಹೆಣ್ಣಿನ ಒಪ್ಪಿಗೆ. ವಧೂವರರ ತಂದೆತಾಯಿಗಳ, ಬಂಧು-ಬಳಗದವರ, ಇಷ್ಟಮಿತ್ರರ ಸಮಕ್ಷಮದಲ್ಲಿ ಕಾಜಿ ಅಥವಾ ಧರ್ಮಗುರು ಹೆಣ್ಣಿನ ಮತ್ತು ಗಂಡಿನ ಒಪ್ಪಿಗೆ ಪಡೆದು ಕುರಾನಿನ ಕೆಲವು ವಚನಗಳನ್ನು ಪಠನಮಾಡಿ, ಕೆಲವು ವಿವಾಹಸ್ತೋತ್ರಗಳನ್ನು ಹೇಳಿ ಇಬ್ಬರಿಗೂ ಆಶೀರ್ವಾದ ಮಾಡುತ್ತಾನೆ. ತರುವಾಯ ಬಾದಾಮಿ, ಖರ್ಜೂರ, ಕಲ್ಲುಸಕ್ಕರೆಯನ್ನು ಪ್ರತಿಯೊಬ್ಬರಿಗೂ ಹಂಚುತ್ತಾರೆ. ಮದುವೆಯ ಒಪ್ಪಂದದಲ್ಲಿ ಮದುವೆಯಾಗುವ ಪುರುಷ ಹೆಣ್ಣಿಗೆ ಕೊಡುವ ಮಹರ್ ಅಥವಾ ಕೊಡುಗೆಯನ್ನು ತಿಳಿಸುವನು. ಸಾಧಾರಣವಾಗಿ ಮಹರ್‍ನ ಹಣ ಪುರುಷ ಸಮಾಜದ ಅಂತಸ್ತನ್ನು ಸೂಚಿಸವುದು. ಈ ಪದ್ಧತಿಯಿಂದ ಕ್ಷುಲ್ಲಕಕಾರಣಗಳಿಗಾಗಿ ವಿವಾಹವಿಚ್ಛೇದನಗಳಾಗುವುದಿಲ್ಲ. ವಿವಾಹ ವಿಚ್ಛೇದನವಾಗುವಾಗ ಹೆಣ್ಣಿಗೆ ನಿಷೇಕ ಪ್ರಸ್ತವಾಗಿದ್ದರೆ, ವಿವಾಹ ವಿಚ್ಛೇದನಕ್ಕೆ ಪುರುಷ ಕಾರಣನಾಗಿದ್ದರೆ ಆಕೆ ಸಂಪೂರ್ಣ ಮಹರ್ ಹಣ ಪಡೆಯುತ್ತಾಳೆ. ನಿಷೇಕ ಪ್ರಸ್ತವಾಗದಿದ್ದರೆ ಮದುವೆಯ ಕರಾರಿನಲ್ಲಿ ತಿಳಿಸಿರುವ ಮಹರಿನ ಅರ್ಧಭಾಗಕ್ಕೆ ಮಾತ್ರ ಆಕೆ ಅರ್ಹಳು. ವಿವಾಹ ವಿಚ್ಛೇದನಕ್ಕೆ ಹೆಂಡತಿಯೇ ಕಾರಣಳಾಗಿದ್ದರೆ ಆಗ ಆಕೆಗೆ ಮಹರಿನ ಹಣದ ಮೇಲೆ ಯಾವ ಅಧಿಕಾರವೂ ಇರುವುದಿಲ್ಲ. ಹಿಂದೆ ವಿವಾಹವಿಚ್ಛೇದನದ ಅಧಿಕಾರ ಗಂಡಹೆಂಡತಿಯರಿಬ್ಬರಿಗೂ ಇತ್ತು; ಪುರುಷನಿಗೇ ಹೆಚ್ಚು ಅನುಕೂಲಕರವಾಗಿತ್ತು. ಈಗ ಈ ಅಧಿಕಾರ ಇರುವುದು ಪುರುಷನಿಗೆ ಮಾತ್ರ. ದಾಂಪತ್ಯಜೀವನದ ಪಾವಿತ್ರ್ಯವನ್ನು ಮುಹಮ್ಮದ್ ಪೈಗಂಬರ್ ಹಲವು ಬಾರಿ ತಿಳಿಸಿದ್ದಾನೆ. ಆದ್ದರಿಂದ ಆತ ವಿವಾಹ ವಿಚ್ಛೇದನಕ್ಕೆ ವಿರುದ್ಧವಾಗಿದ್ದ. ವಿವಾಹ ವಿಚ್ಛೇದನ ಕಾನೂನಿನ ಪ್ರಕಾರವಿದ್ದರೂ ದೇವರು ಅದನ್ನು ದ್ವೇಷಿಸುತ್ತಾನೆ ಎಂದು ಆತ ತಿಳಿಸಿದ. ಒಬ್ಬ ಮನುಷ್ಯನ ಯೋಗ್ಯತೆಯನ್ನು ಆತನ ವೈವಾಹಿಕ ಜೀವನದಿಂದ, ಸಂಬಂಧಗಳಿಂದ ನಿರ್ಧರಿಸಬಹುದೆಂದು ಆತ ಹೇಳಿದ್ದಾನೆ. ಮೂರು ಹಂತಗಳಲ್ಲಿ ನೀಡುವ ತಲಾಖ್ (ವಿಚ್ಛೇದನ) ಪದ್ಧತಿಯಿಂದ ಮುಸ್ಲಿಮರನ್ನು ವಿಮುಖಗೊಳಿಸುವ ನೂತನ ವಿವಾಹ ಒಪ್ಪಂದ (ನಿಕಾ ನಾಮಾ) 2004ರಲ್ಲಿ ಭಾರತದಲ್ಲಿ ಜಾರಿಗೆ ಬಂದಿದೆ.

	ಹಿಂದು ವಿವಾಹ : ಧರ್ಮಶಾಸ್ತ್ರಗಳ ಪ್ರಕಾರ ಹಿಂದು ವಿವಾಹಕ್ಕೆ ಮೂರು ಉದ್ದೇಶಗಳಿವೆ-ಧರ್ಮ, ಪ್ರಜೆ, ರತಿ. ಹಿಂದುವಿನ ಕಾರ್ಯಕ್ಷೇತ್ರ ವೆಲ್ಲ ಧರ್ಮಯುತವಾಗಿರಬೇಕೆಂಬುದು ಹಿಂದುಜೀವನದ ಮುಖ್ಯ ಗುರಿ. ಆದುದರಿಂದ ವಿವಾಹ ಧರ್ಮಕ್ಷೇತ್ರಕ್ಕೆ ಸಂಬಂಧಪಟ್ಟ ಒಂದು ಸಂಸ್ಕಾರ. ಧರ್ಮವೇ ವಿವಾಹದ ಮೊದಲನೆಯ ಉದ್ದೇಶವೆಂದು ಪರಿಗಣತವಾಗಿದೆ. ಮಕ್ಕಳನ್ನು ಪಡೆಯುವುದು ಸಮಾಜದ ಅಭಿವೃದ್ಧಿಗೆ ಅಗತ್ಯವಾದುದೆಂದು ತಿಳಿಯಲಾಗಿದೆ. ಆದುದರಿಂದ ಪ್ರತಿಯೊಬ್ಬ ಪುರುಷನೂ ಪ್ರತಿಯೊಬ್ಬ ಸ್ತ್ರೀಯೂ ಮದುವೆಯಾಗಬೇಕೆಂದು ಶಾಸ್ತ್ರಗಳು ತಿಳಿಸಿವೆ. ಪ್ರತಿಯೊಬ್ಬ ಹಿಂದು ತನ್ನ ಜಾತಿಯಲ್ಲಿಯೇ ಮದುವೆಯಾಗಬೇಕೆಂಬ ನಿಯಮವಿದೆ. ಆದರೆ ಕೆಲವು ಸಲ ಅಂತರ್‍ಜಾತೀಯ ವಿವಾಹಗಳು ನಡೆಯುತ್ತವೆ. ಅವುಗಳಲ್ಲಿ ಎರಡು ವಿಧ - ಅನುಲೋಮ ಮತ್ತು ಪ್ರತಿಲೋಮ. ಒಬ್ಬ ಪುರುಷ ತನಗಿಂತ ಕೆಳಜಾತಿಯ ಸ್ತ್ರೀಯನ್ನು ಮದುವೆಯಾಗಬಹುದು. ಈ ವಿವಾಹಪದ್ಧತಿಗೆ ಅನುಲೋಮವೆಂದು ಹೆಸರು. ಒಬ್ಬ ಸ್ತ್ರೀ ತನಗಿಂತಲೂ ಕೆಳಜಾತಿಯ ಪುರುಷನನ್ನು ವಿವಾಹವಾದರೆ ಇದಕ್ಕೆ ಪ್ರತಿಲೋಮ ವಿವಾಹವೆಂದು ಹೆಸರು.

	ವಿವಾಹವಾಗುವ ಯುವಕಯುವತಿಯರ ವಯಸ್ಸಿನ ವಿಷಯವಾಗಿ ಹಲವು ನಿಯಮಗಳಿವೆ. ವೇದಗಳ ಕಾಲದಲ್ಲಿ ಮದುವೆ ಪ್ರಾಪ್ತ ವಯಸ್ಕರಲ್ಲಿ ಆಗುತ್ತಿತ್ತು. ವೇದಗಳಲ್ಲಿ ತಿಳಿಸಿರುವ ವಿವಾಹ ಮಂತ್ರಗಳನ್ನೂ ಕರ್ಮಗಳನ್ನೂ ಪರಿಶೀಲಿಸಿದರೆ, ಸ್ತ್ರೀ ಪ್ರಾಪ್ತ ವಯಸ್ಕಳಾಗಿ ಸ್ವವಿವೇಚನೆಯಿಂದ ಒಪ್ಪಿ ವಿವಾಹವಾಗುತ್ತಿದ್ದ ಪದ್ಧತಿ ಇತ್ತೆಂದು ಹೇಳಬಹುದು. ಆದರೆ ಕಾಲಕ್ರಮೇಣ ಬಾಲ್ಯವಿವಾಹಗಳು ರೂಢಿಗೆ ಬಂದವು. ಮನು, ಪರಾಶರ ಮೊದಲಾದವರ ಅಭಿಪ್ರಾಯದಲ್ಲಿ ಹುಡುಗಿ ಋತುಮತಿಯಾಗುವ ಮೊದಲೇ ವಿವಾಹವಾಗಬೇಕು. ಧರ್ಮಸೂತ್ರಗಳ ಪ್ರಕಾರ ಸಾಧಾರಣವಾಗಿ ಕನ್ಯೆಗೆ ಹತ್ತು ಹನ್ನೆರಡು ವರ್ಷ ತುಂಬಿದಾಗ ವಿವಾಹ ಆಗಬೇಕು. ಬ್ರಹ್ಮಚಾರಿ ವೇದಾಧ್ಯಯನದಲ್ಲಿ ಸುಮಾರು ಎಂಟರಿಂದ ಹನ್ನೆರಡು ವರ್ಷಗಳನ್ನು ಕಳೆಯಬೇಕಾದುದರಿಂದ, ಆತನ ವಿವಾಹದ ವಯಸ್ಸು ಸುಮಾರು ಇಪ್ಪತ್ತು ವರ್ಷಗಳೆಂದು ಹೇಳಬಹುದು. ಮನುವಿನ ಅಭಿಪ್ರಾಯದಲ್ಲಿ ಇಪ್ಪತ್ನಾಲ್ಕು ವರ್ಷಗಳ ವಯಸ್ಸಿನ ಯುವಕ ಎಂಟುವರ್ಷ ವಯಸ್ಸಿನ ಬಾಲಕಿಯನ್ನೂ ಮೂವತ್ತು ವರ್ಷ ವಯಸ್ಸಿನ ಯುವಕ ಹನ್ನೆರಡು ವರ್ಷ ವಯಸ್ಸಿನ ಬಾಲಕಿಯನ್ನೂ ಮದುವೆಯಾಗಬೇಕು. ವಿವಾಹವಾಗುವಾಗ ಯುವಕ ಯುವತಿಯರ ವಂಶ, ವಿದ್ಯೆ, ಗುಣ, ರೂಪಗಳನ್ನು ಪರಿಶೀಲಿಸಿ ವಿವಾಹವಾಗಬೇಕೆಂದು ಧರ್ಮ ಶಾಸ್ತ್ರಗಳು ನಿರೂಪಿಸಿವೆ. 

	ವಿವಾಹದಲ್ಲಿ ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಆಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ಎಂಟು ವಿಧಗಳಿವೆ. 

	ಬ್ರಾಹ್ಮ : ವಿದ್ಯಾವಂತನೂ ಶೀಲವಂತನೂ ಆದ ವರನನ್ನು ತಾನಾಗಿ ಕರೆದು, ಉತ್ತಮ ವಸ್ತ್ರವನ್ನು ಉಡಿಸಿ ಅಲಂಕಾರಗಳಿಂದ ಪೂಜಿಸಿ, ಅಲಂಕೃತಳಾದ ಕನ್ಯೆಯನ್ನು ಆತನಿಗೆ ದಾನಮಾಡುವುದು ಬ್ರಾಹ್ಮವಿವಾಹ. 

	ದೈವ : ಯಜ್ಞಕರ್ಮ ಮಾಡುವ ಋತ್ವಿಕನಿಗೆ ಅಲಂಕರಿಸಿದ ಕನ್ಯೆಯನ್ನು ದಾನ ಮಾಡುವುದು ದೈವವಿವಾಹ.

	ಆರ್ಷ : ಯಾಗ ಮೊದಲಾದ ಧರ್ಮಸಿದ್ಧಿಗಾಗಿ ಅಥವಾ ಕನ್ಯೆಗಾಗಿ ಒಂದು ಅಥವಾ ಎರಡು ಗೋವುಗಳನ್ನು ವರನಿಂದ ಪಡೆದು ಶಾಸ್ತ್ರೋಕ್ತವಾಗಿ ಆತನಿಗೆ ಕನ್ಯೆಯನ್ನು ದಾನಮಾಡುವುದು ಆರ್ಷ ವಿವಾಹ.

	ಪ್ರಾಜಾಪತ್ಯ : ಕನ್ಯೆಯನ್ನು ದಾನ ಮಾಡುವಾಗ ನೀವಿಬ್ಬರೂ ಕೂಡಿಕೊಂಡು ಧರ್ಮವನ್ನಾಚರಿಸಿ ಎಂದು ಹೇಳಿ ಸತ್ಕರಿಸಿ ಕನ್ಯೆಯನ್ನು ದಾನ ಮಾಡುವುದು ಪ್ರಾಜಾಪತ್ಯ ವಿವಾಹ.

	ಆಸುರ : ವರನು ಕನ್ಯೆಯ ತಾಯಿತಂದೆ ಮೊದಲಾದ ಬಂಧುಗಳಿಗೂ ಕನ್ಯೆಗೂ ಶಕ್ತ್ಯಾನುಸಾರ ಹಣ ಕೊಟ್ಟು ವಿವಾಹವಾಗುವುದು ಆಸುರ ವಿವಾಹ.

	ಗಾಂಧರ್ವ : ಕನ್ಯೆ ಮತ್ತು ವರ ಪರಸ್ಪರ ಪ್ರೀತಿಯಿಂದ ವಿವಾಹವಾಗುವುದು ಗಾಂಧರ್ವ ವಿವಾಹ.

	ರಾಕ್ಷಸ : ಬಲಾತ್ಕರಿಸಿ ಕನ್ಯೆಯನ್ನು ಅಪಹರಿಸುವುದು, ಕನ್ಯೆಯ ಕಡೆಯವರು ತಡೆದರೆ ಅವರನ್ನು ಕೊಂದು ಅಥವಾ ಅವರ ಅವಯವಗಳನ್ನು ಕತ್ತರಿಸಿ, ಗೋಡೆ ಮೊದಲಾದವುಗಳನ್ನು ಭೇದಿಸಿ ಹಾ ಎಂದು ಕೂಗುತ್ತಿರುವ ಮತ್ತು ಅಳುತ್ತಿರುವ ಕನ್ಯೆಯನ್ನು ಆಕೆಯ ಮನೆಯಿಂದ ಬಲಾತ್ಕಾರದಿಂದ ಅಪಹರಿಸಿ ವಿವಾಹವಾಗುವುದು ರಾಕ್ಷಸ ವಿವಾಹ.

	ಪೈಶಾಚ : ನಿದ್ರಿಸುತ್ತಿರುವ ಅಥವಾ ಮದ್ಯಪಾನದಿಂದ ಮದವೇರಿರುವ ಅಥವಾ ತನ್ನ ಶೀಲವನ್ನು ಕಾದುಕೊಳ್ಳದೆ ಅಜಾಗರೂಕತೆಯಿಂದಿರುವ ಕನ್ಯೆಯೊಡನೆ ಏಕಾಂತದಲ್ಲಿ ಸಂಸರ್ಗ ಮಾಡುವುದು ಪೈಶಾಚಿಕ ವಿವಾಹ. ಇದು ವಿವಾಹಗಳಲ್ಲಿ ಅಧಮವೂ ಅತ್ಯಂತ ಪಾಪಕರವೂ ಆದುದೆಂದು ಧರ್ಮಶಾಸ್ತ್ರಗಳು ತಿಳಿಸಿವೆ. ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ ಎಂಬ ನಾಲ್ಕು ವಿವಾಹಗಳು ಉತ್ತಮವೆಂದೂ ಬ್ರಾಹ್ಮ ವಿವಾಹ ಸರ್ವಶ್ರೇಷ್ಠವೆಂದೂ ಪರಿಗಣಿಸಲಾಗಿದೆ. 

	ವಿವಾಹವಿಧಿಗಳು : ವಿವಾಹ ಎಂಬ ಪದಕ್ಕೆ ಹೆಣ್ಣನ್ನು ವಿಶೇಷ ವಿಧಿಯಿಂದ ಹೊಂದಿಸುವುದು ಎಂದು ಅರ್ಥ (ವಿಶಿಷ್ಟಂ ವಹನಂ ವಿವಾಹಃ - ಅಮರಕೋಶ ಸುಧಾವ್ಯಾಖ್ಯಾನ). ಈ ಅರ್ಥದ ಪ್ರಕಾರ ಹೆಣ್ಣನ್ನು ಗಂಡನ ಮತ್ತು ಆತನ ಕುಟುಂಬದ ಸಂಗಡ ಸೇರಿಸುವುದು ಎಂದಾಗುತ್ತದೆ. ಆದರೆ ವಿವಾಹದಿಂದ ತಂದೆತಾಯಿಗಳಿಗೆ ಹುಡುಗಿಯ ಮೇಲಿರುವ ಸ್ವಾಮ್ಯ ಸಂಪೂರ್ಣವಾಗಿ ಕಡಿದು ಹೋಗುವುದಿಲ್ಲ. ಆದುದರಿಂದಲೇ ಕನ್ಯಾದಾನ ಮಾಡುವಾಗ ಹೇಳುವ ಮಂತ್ರಕ್ಕೂ ಮಿಕ್ಕ ಎಲ್ಲ ವಸ್ತುಗಳನ್ನು ದಾನಮಾಡುವಾಗ ಹೇಳುವ ಮಂತ್ರಕ್ಕೂ ವ್ಯತ್ಯಾಸವಿದೆ. ಕನ್ಯಾದಾನ ವಿನಾ ಉಳಿದ ಎಲ್ಲ ದಾನಗಳಿಗೂ ಸ್ವತ್ವತ್ಯಾಗ ಸಂಬಂಧ ದ್ಯೋತವಾದ ಸಮಯ ಎಂಬ ಪದವನ್ನು ಉಪಯೋಗಿಸುವರು. ಈ ಪದವನ್ನು ಉಪಯೋಗಿಸುವುದರಿಂದ ದಾನ ಮಾಡುವ ವಸ್ತುವಿಗೂ ತನಗೂ ಇರುವ ಸಂಬಂಧ ಸಂಪೂರ್ಣವಾಗಿ ತ್ಯಾಜ್ಯವಾಗುತ್ತದೆ. ಕನ್ಯಾದಾನ ಮಾಡುವಾಗ ಸಮಯ ಎಂಬ ಪದವನ್ನು ಉಪಯೋಗಿಸುವುದಿಲ್ಲ. ಆದುದರಿಂದಲೇ ವಿವಾಹದಿಂದ ಜನಿಸಿದ ಶಿಶುಗಳಿಗೆ ಮಾತಾಮಹ ಕುಲದಲ್ಲಿ ಕೆಲವು ವಿಶೇಷವಾದ ಅನುಕೂಲಗಳಿರುತ್ತವೆ. 

	ಹಿಂದು ವಿವಾಹ ವಿಧಿಗಳಲ್ಲಿ ಕನ್ಯಾದಾನ, ಪಾಣಿಗ್ರಹಣ, ಲಾಜ ಹೋಮ, ಅಗ್ನಿಪರಿನಯನ, ಸಪ್ತಪದಿ - ಇವು ಮುಖ್ಯವಾದವು. 

	ವಧುವಿನ ತಂದೆ ಪತ್ನೀಸಮೇತನಾಗಿ ತನ್ನ ಮಗಳನ್ನು ಧಾರೆಯೆರೆದು ಕೊಡುತ್ತಾನೆ. ಕನ್ಯೆಯನ್ನು ದಾನಮಾಡುವಾಗ ಹೆಣ್ಣಿನ ತಂದೆ ವರನನ್ನು ಕುರಿತು ಧರ್ಮೇಚಅರ್ಥೇಚಕಾಮೇಚ ನಾತಿ ಚರಿತವ್ಯಾತ್ವಯೇಯಮ್ (ನೀನು ಧರ್ಮದಲ್ಲಿ ಅರ್ಥದಲ್ಲಿ ಕಾಮದಲ್ಲಿ ಇವಳನ್ನು ಮೀರಿ ನಡೆಯತಕ್ಕದ್ದಲ್ಲ) ಎಂದು ಹೇಳಿದರೆ ಅದಕ್ಕೆ ವರನು ನಾತಿಚರಿಷ್ಯಾಮಿ (ನಾನು ಮೀರಿ ನಡೆಯುವುದಿಲ್ಲ) ಎಂದು ವಾಗ್ದಾನ ಮಾಡುತ್ತಾನೆ. ಅನಂತರ ವರ ವಧುವಿನ ಕೈ ಹಿಡಿದು ಆಕೆ ತನಗೆ ತನ್ನ ಸುಖದುಃಖ ಮತ್ತು ಸಂಪತ್ತುಗಳಲ್ಲಿ ಭಾಗಿಯಾಗಿರಬೇಕೆಂದು ಕೋರಿ ದೈವಸಾಕ್ಷಿಯಾಗಿ ಗೃಹಸ್ಥಧರ್ಮದ ಪರಿಪಾಲನೆಗೆ ಸಹಾಯವಾಗಬೇಕೆಂದು ತಿಳಿಸಿ ಕರಿಮಣಿಗಳಿಂದ ಕೂಡಿದ ಮಾಂಗಲ್ಯವನ್ನು ವಧುವಿನ ಕೊರಳಿಗೆ ಕಟ್ಟುತ್ತಾನೆ. ಹಿಂದು ವಿವಾಹಗಳಲ್ಲಿ ಮಾಂಗಲ್ಯಧಾರಣೆ ಒಂದು ಮುಖ್ಯವಿಧಿ. 

	ಲಾಜಹೋಮ ಕಾಲದಲ್ಲಿ ವಧು ಅರಳನ್ನು ಅಗ್ನಿಕುಂಡಕ್ಕೆ ಹಾಕುತ್ತ “ನನ್ನ ಪತಿ ಆಯುಷ್ಮಂತನಾಗಲಿ ನನ್ನ ಜ್ಞಾತಿಗಳು ಏಳಿಗೆ ಹೊಂದಲಿ” ಎಂದು ಹೇಳುತ್ತಾಳೆ. ತರುವಾಯ ವರ ವಧುವಿನ ಕಾಲಿನಿಂದ ಶಿಲೆಯನ್ನು ತುಳಿಸುವಾಗ “ಈ ಕಲ್ಲಿನ ಮೇಲೆ ನಿಲ್ಲು. ಏನೇ ಕಷ್ಟಗಳು ಬಂದರೂ ಈ ಕಲ್ಲಿನಂತೆ ಕದಲದೇ ಸ್ಥಿರಳಾಗಿರು” ಎಂದು ತಿಳಿಸುತ್ತಾನೆ. ಸಪ್ತಪದಿ ವಿವಾಹವಿಧಿಗಳಲ್ಲೆಲ್ಲ ಅತಿ ಮುಖ್ಯವಾದುದು. ಇದು ಮುಗಿದ ತರುವಾಯ ವಿವಾಹ ವಿಧಿ ಸಂಪೂರ್ಣವಾಗುವುದು. ಅಗ್ನಿಕುಂಡದ ಸುತ್ತಲೂ ವಧೂವರರು ಏಳು ಹೆಜ್ಜೆಗಳನ್ನಿಡುತ್ತಾರೆ. ಹೆಣ್ಣಿನ ಹೆಜ್ಜೆಯನ್ನಿಡಿಸಿ ವರನು “ಅನ್ನಕ್ಕಾಗಿ ಮೊದಲನೆಯ ಹೆಜ್ಜೆಯನ್ನಿಡು (ಓಂ ಇಷೆದಾಭವ), ಬಲದ ಅಭಿವೃದ್ಧಿಗಾಗಿ ಎರಡನೆಯ ಹೆಜ್ಜೆಯನ್ನಿಡು (ಊರ್ಜೇ ದ್ವಿಪದಾಭವ), ಧನದ ಅಭಿವೃದ್ಧಿಗಾಗಿ ಮೂರನೆಯ ಹೆಜ್ಜೆಯನ್ನಿಡು (ರಾಯಸ್ಫೂಷಾಯ ತ್ರಿಪದಾಭವ), ಮಮತೆಯ ಅಭಿವೃದ್ಧಿಗಾಗಿ ನಾಲ್ಕನೆಯ ಹೆಜ್ಜೆಯನ್ನಿಡು (ಮಾಯೋಭವಾಯ ಚತುಷ್ಪದಾಭವ), ಸಂತಾನಾಭಿವೃದ್ಧಿಗಾಗಿ ಐದನೆಯ ಹೆಜ್ಜೆಯನ್ನಿಡು (ಪ್ರಜಾಭ್ಯ ಃ ಪಂಚ ಪದಾಭವ), ಅನುಕೂಲವಾದ ಋತುಕಾಲಗಳಿಗಾಗಿ ಆರನೆಯ ಹೆಜ್ಜೆಯನ್ನಿಡು (ಋತುಭ್ಯ ಃ ಷಟ್ಬದಾಭವ), ನಮ್ಮ ಸ್ನೇಹಕ್ಕಾಗಿ ಏಳನೆಯ ಹೆಜ್ಜೆಯನ್ನಿಡು (ಸಖೇ ಸಪ್ತಪದಾಭವ), ನನ್ನನ್ನು ಅನುಸರಿಸು” ಎಂದು ಪ್ರತಿಯೊಂದು ಹೆಜ್ಜೆಯ ಅನಂತರ ತಿಳಿಸುತ್ತಾನೆ. ಗಂಡಹೆಂಡಿರು ಸುಖಸಂತೋಷಗಳನ್ನು ಒಟ್ಟಿಗೆ ಅನುಭವಿಸಿ ತಮ್ಮ ಆಸೆ ಆಕಾಂಕ್ಷೆಗಳನ್ನು ಜೀವನ ದೃಷ್ಟಿಯನ್ನು ಐಕ್ಯಗೊಳಿಸಿ ಬದುಕಿ ಬಾಳಬೇಕೆಂಬುದು ಈ ಮಂತ್ರದ ಮುಖ್ಯೋದ್ದೇಶ. 

	ವಿವಾಹದ ಆಧುನಿಕ ಪ್ರವೃತ್ತಿಗಳು : ಆಧುನಿಕ ಸಮಾಜಗಳ ವಿವಾಹಗಳಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಸಾಂಪ್ರದಾಯಿಕ ವಿವಾಹಗಳಲ್ಲಿ ಹಿರಿಯರು ಕನ್ಯೆಯನ್ನು ನಿಶ್ಚಯಿಸುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಯುವಕ ತಾನು ಮದುವೆಯಾಗುವ ಯುವತಿಯನ್ನು ಮೊದಲು ನೋಡುತ್ತಿದ್ದುದು ವಿವಾಹದಲ್ಲಿ ಮಾತ್ರ. ಆಗ ಮದುವೆಯ ಮುಖ್ಯೋದ್ದೇಶ ಮನೆಗೆ ಅರ್ಹಳಾದ ಸೊಸೆಯನ್ನು ಆರಿಸಿ ತರುವುದು. ಇದು ಸಾಂಪ್ರದಾಯಿಕ ಕುಟುಂಬನೀತಿಗೆ ಅನುಗುಣವಾಗಿತ್ತು. ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ಯುವಕನಿಗೂ ತಾನು ಒಪ್ಪಿದ ಹುಡುಗಿಯನ್ನು ವಿವಾಹವಾಗಬೇಕೆಂಬ ಬಯಕೆಯಿರುವುದು ಸಹಜ. ವಿವಾಹವಾದ ಮೇಲೆ ಯುವಕ ತಾನು ಪ್ರತ್ಯೇಕ ಸಂಸಾರವನ್ನು ಹೂಡಬೇಕೆಂಬ ಅಭಿಲಾಷೆಯಿರುವುದರಿಂದ ತನ್ನ ಸಂಗಡ ಬಾಳಿಬದುಕುವ ಕನ್ಯೆ ತಾನು ಒಪ್ಪಿದವಳಾಗಬೇಕು ಎಂದು ಬಯಸುತ್ತಾನೆ. ಆದರೆ ವಿವಾಹದಲ್ಲಿ ಹಿರಿಯರ ಪಾತ್ರ ಕೇವಲ ಔಪಚಾರಿಕವೆಂದು ಭಾವಿಸಲಾಗದು. ವಿವಾಹ ಪ್ರಯತ್ನಗಳನ್ನು ಮಾಡುವವರು ತಂದೆತಾಯಿಗಳು. ಆದರೆ ಅವರು ಒಪ್ಪಿದ ಕನ್ಯೆಯನ್ನು ತಮ್ಮ ಮಗ ಆಗಲೇಬೇಕೆಂಬ ನಿರ್ಬಂಧವಿಲ್ಲ. ತಂದೆತಾಯಿಯರು ಇದನ್ನು ಅರಿತು ಬದಲಾವಣೆಗಳಾಗುತ್ತಿರುವ ಸ್ಥಿತಿಗಳಿಗೆ ಹೊಂದಿಕೊಂಡು ಹೋಗುವ ಪ್ರವೃತ್ತಿ ಹೆಚ್ಚಾಗಿ ಕಾಣಬರುತ್ತಿದೆ. ಈ ಪ್ರವೃತ್ತಿ ಭಾರತದ ನಗರಗಳಲ್ಲಿ ವಿಶೇಷವಾಗಿಯೂ ಹಳ್ಳಿಗಳಲ್ಲಿ ವಿರಳವಾಗಿಯೂ ಕಾಣಬರುತ್ತದೆ. 

	ಈ ಬದಲಾವಣೆ ಕೇವಲ ಭಾರತೀಯ ಸಮಾಜಕ್ಕೆ ಮಾತ್ರ ಸಂಬಂಧಪಟ್ಟದ್ದಲ್ಲ. ಹಿರಿಯರಿಂದ ನಿಶ್ಚಿತವಿವಾಹಗಳು ಎಲ್ಲ ಸಮಾಜಗಳಲ್ಲಿಯೂ ರೂಢಿಯಲ್ಲಿದ್ದವು. ಈಗ ಪಾಶ್ಚಿಮಾತ್ಯ ಸಮಾಜದಲ್ಲಿ ಪ್ರೇಮಾದರ್ಶ ವಿವಾಹತತ್ತ್ವ ಬಹು ಪ್ರಾಮುಖ್ಯ ಪಡೆದಿದೆ. ಇದು ಸಂಪೂರ್ಣವಾಗಿ ಯುವಕಯುವತಿಯರ ಅನುನಯದಿಂದ ಕೂಡಿದೆ. ಈ ತತ್ತ್ವ ಜೀವನದ ರೀತಿ, ಆದರ್ಶಗಳ ಪರಸ್ಪರ ಹೊಂದಾಣಿಕೆಯ ನೀತಿಯ ಮೇಲೆ ಪ್ರತಿಪಾದಿತವಾಗಿದೆ. ಈ ಪ್ರವೃತ್ತಿಗೆ ಅನುಕೂಲವಾಗಿರುವ ಮುಖ್ಯ ಸನ್ನಿವೇಶಗಳನ್ನು ಸ್ಥೂಲವಾಗಿ ಸೂಚಿಸಬಹುದು. ಸರ್ವತೋಮುಖವಾಗಿ ವಿದ್ಯಾಭ್ಯಾಸದ ಮುನ್ನಡೆ, ಸ್ತ್ರೀವಿದ್ಯಾಭ್ಯಾಸ, ಸ್ತ್ರೀಪುರುಷರ ಸಹವಿದ್ಯಾಭ್ಯಾಸ, ಸಮಾಜದ ಆರ್ಥಿಕ ಅಭಿವೃದ್ಧಿ, ಔದ್ಯೋಗಿಕ ಸೌಲಭ್ಯ, ಯುವಕಯುವತಿಯರ ಸಂಪರ್ಕ ಹೆಚ್ಚಾಗಲು ಒದಗಿರುವ ಸನ್ನಿವೇಶಗಳು ಮೊದಲಾದ ವಿಷಯಗಳು ಪ್ರೇಮಾದರ್ಶ ತತ್ತ್ವದ ತಳಹದಿಯ ಮೇಲೆ ನಡೆಯುವ ವಿವಾಹಗಳಿಗೆ ಉತ್ತೇಜಕವಾಗಿವೆ. ಅನುನಯದಿಂದ, ಪರಸ್ಪರ ರೂಪಲಾವಣ್ಯ, ಗುಣ, ಶೀಲ, ವಿದ್ಯೆ ಮತ್ತು ಜೀವನದ ಆದರ್ಶಗಳನ್ನು ತಿಳಿದು ವಿವಾಹವಾಗುವುದು ಯುವಕಯುವತಿಯರಲ್ಲಿ ಹೆಚ್ಚಾಗಿದೆ. ಆದರೆ ಸೀಮಿತ ಕಾಲಾವಧಿಯಲ್ಲಿ ಪರಸ್ಪರ ತಿಳಿವಳಿಕೆ ಸಂಪೂರ್ಣವಾಗಿರಲು ಸಾಧ್ಯವಿಲ್ಲ. ಮದುವೆಯಾಗುವಾಗ ಸಂಪೂರ್ಣ ಹೊಂದಾಣಿಕೆ ಯಾಗುವುದೆಂಬ ಭಾವದಿಂದಲೇ ಒಪ್ಪಿ ಮದುವೆಯಾಗುತ್ತಾರೆ. ವೈವಾಹಿಕ ಜೀವನದಲ್ಲಿ ಕಾಲಕ್ರಮೇಣ ಗಂಡಹೆಂಡಿರು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಳ್ಳುತ್ತಾರೆ. ಪರಸ್ಪರ ವ್ಯತ್ಯಾಸಗಳು ಪ್ರಧಾನವಾಗಿದ್ದರೆ ಸಾಧಾರಣವಾಗಿ ವಿವಾಹವಾದ ಒಂದೆರಡು ವರ್ಷಗಳಲ್ಲಿ ಬೇರೆಯಾಗುತ್ತಾರೆ. ಆದುದರಿಂದಲೇ ಪಾಶ್ಚಿಮಾತ್ಯ ಸಮಾಜಗಳಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚಾಗಿವೆ. ವಿವಾಹ ವಿಚ್ಛೇದನಗಳು ಸಾಧಾರಣವಾಗಿ ಶಿಶುಗಳಿಲ್ಲದ ಗಂಡಹೆಂಡಿರಲ್ಲಿ ಹೆಚ್ಚು. ಮಕ್ಕಳಾದ ಮೇಲೆ ವಿವಾಹ ವಿಚ್ಛೇದನ ಸಂದರ್ಭಗಳು ವಿರಳ. 

	ವಿದ್ಯಾಭ್ಯಾಸದ ಮುನ್ನಡೆ, ಆರ್ಥಿಕ ಜೀವನದ ಪ್ರಗತಿ, ಜನರ ಪರಸ್ಪರ ಸಮ್ಮಿಲನ ಮೊದಲಾದ ಆಧುನಿಕ ಸಮಾಜದ ಲಕ್ಷಣಗಳು ವಿವಾಹ ಪದ್ಧತಿಗಳ ಮೇಲೆ ಪ್ರಭಾವವನ್ನು ಬೀರಿವೆ. ಯುವಕ ಯುವತಿಯರ ವಿವಾಹದ ವಯಸ್ಸು ಹೆಚ್ಚಾಗಿದೆ. ವಿವಾಹವಿಚ್ಛೇದನಗಳು ಕಾನೂನಿನಲ್ಲಿ ಸ್ಥಾನಗಳಿಸಿವೆ. ಯುವಕನಿಗೆ 21ವರ್ಷ, ಯುವತಿಗೆ 18ವರ್ಷ ವಯೋಮಿತಿಯನ್ನು ಭಾರತೀಯ ಕಾನೂನು ವಿಧಿಸಿದೆ. ವರದಕ್ಷಿಣೆ (ನೋಡಿ- ವರದಕ್ಷಿಣೆ) ಯಂಥ ಪದ್ಧತಿಯನ್ನು ನಿಷೇಧಿಸಲಾಗಿದೆ. ವಿವಾಹದ ಕಾನೂನುಬದ್ಧ ನೋಂದಣಿಯನ್ನೂ ಜಾರಿಗೊಳಿಸಲಾಗಿದೆ. ನಗರಗಳಲ್ಲಿ ಅಂತರಜಾತೀಯ ವಿವಾಹಗಳು ಹೆಚ್ಚುತ್ತಿದ್ದು ಸಾಂಪ್ರದಾಯಿಕ ವಿವಾಹಗಳು ಈಗ ಬದಲಾವಣೆ ಹೊಂದುತ್ತಿವೆ ಎನ್ನಬಹುದು.				
	(ಜೆ.ಎಸ್.ಎಚ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ